ಪಾದುವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
ಮಂಗಳೂರು: ಯಾರಿಗೆ ಅವಕಾಶ ಸಿಗುತ್ತೋ ಅವರು ಬೆಳೆಯುತ್ತಾರೆ. ಸಮಾಜದ ಮುಂದೆ ಪ್ರಸಿದ್ಧಿಯನ್ನು ಗಳಿಸುತ್ತಾರೆ, ಆದರೆ ಯಾರು ಅವಕಾಶ ಕೊಡುತ್ತಾರೋ ಅವರನ್ನು ತಾವು ಎಂದೂ ಮರೆಯಬಾರದು ಎಂದು ಪ್ರಸಿದ್ಧ ಸಿನೇಮಾ ಹಾಗೂ ರಂಗನಟ ಅರವಿಂದ ಬೋಳಾರ್ ಹೇಳಿದರು.
ಅವರು ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇಲ್ಲಿನ ಪ್ರಸಕ್ತ ವರ್ಷದ ಪ್ರತಿಭಾ ದಿನಾಚರಣೆಯ ಮುಖ್ಯ ಉದ್ಘಾಟಕರಾಗಿ ತಮ್ಮ ಅಭಿಪ್ರಾಯವನ್ನಿತ್ತರು. ಹಾಗೆಯೇ ಈಗಿನ ಯುವಜನರು ತಾಂತ್ರಿಕ ಉಪಕರಣಗಳಿಗೆ ಬಲಿಯಾಗದೇ, ಮನುಷ್ಯ ಸಂಬಂಧಗಳಿಗೆ ಬೆಲೆ ಕೊಟ್ಟು ಜೀವನವನ್ನು ಮುನ್ನೆಡಸಲು ವಿದ್ಯಾರ್ಥಿಗಳಿಗೆ ಕರೆಯಿತ್ತರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಆಲ್ವಿನ್ ಸೆರಾವೊರವರು ವಿದ್ಯಾರ್ಥಿಗಳಿಗೆ ಸ್ಪರ್ಧಾಮನೋಭಾವದಿಂದ ದಿನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ. ವಿನ್ಸೆಂಟ್ ಮೊಂತೇರೊರವರು ನಮ್ಮ ಪ್ರತಿಭೆಗಳು ಒಂದು ಸದೃಢ ಸಮಾಜ ರೂಪಿಸುವಲ್ಲಿ ಸಹಕಾರಿಯಾಗಲಿ ಎಂದು ಸ್ಪರ್ಧಾಳುಗಳಿಗೆ ಶುಭಕೋರಿದರು.
ಉಪಪ್ರಾಂಶುಪಾಲರಾದ ರೋಶನ್ ಸಾಂತುಮಾಯರ್ ಇವರು ಪ್ರತಿಭಾ ದಿನಾಚರಣೆಯ ಬಗ್ಗೆ ಪ್ರಸ್ತಾವನೆಗೈದು ಸ್ವಾಗತಿಸಿದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೆಲ್ಸ್ಟನ್ ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿಯಾದ ಡೆಲ್ವಿನ್ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಉಪನ್ಯಾಸಕ ರಾಹುಲ್ ಹಾಗೂ ಉಪನ್ಯಾಸಕಿ ಕು. ರೇಶ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗೀತಾ ಶೆಣೈ ಹಾಗೂ ಓಶ್ಟಿನ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ರೇಶ್ಮಾ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.