ಅಂತ್ಯಸಂಸ್ಕಾರಕ್ಕೆ ಜಾಗ ನಿರಾಕರಣೆ: ಮೃತದೇಹದೊಂದಿಗೆ ಮಳೆಯಲ್ಲೇ ನೆನೆಯುತ್ತಾ ಕಾದ ದಲಿತರು

Update: 2019-09-02 17:37 GMT

ಚೆನ್ನೈ, ಸೆ.2: ದಲಿತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಮೇಲ್ಜಾತಿಯ ಜನರು ಜಾಗ ನೀಡದ ಕಾರಣ ದಲಿತರು ಮಳೆಯಲ್ಲೇ ನೆನೆಯುತ್ತಾ ಮೃತದೇಹದ ಅಂತ್ಯಸಂಸ್ಕಾರಕ್ಕಾಗಿ ಕಾದ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. 50 ವರ್ಷದ ದಲಿತ ವ್ಯಕ್ತಿ ಷಣ್ಮುಗವೇಲು ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಸಾಂಪ್ರದಾಯಿಕ ರುದ್ರಭೂಮಿಗೆ ಮೃತದೇಹವನ್ನು ಒಯ್ಯಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದ ಪರಿಣಾಮ ಬೆಂಕಿ ಹೊತ್ತಿಸಲಾಗದೆ ಸಂಬಂಧಿಕರು ಕಂಗಾಲಾದರು.

“ಈ ಕಾರಣದಿಂದಾಗಿ ದಲಿತರು ಮೇಲ್ಜಾತಿಯವರೊಂದಿಗೆ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಸ್ಥಳ ಕೇಳಿದ್ದರು. ಆದರೆ ಅವರು ನಿರಾಕರಿಸಿದರು. ಸಮಸ್ಯೆಯ ಬಗ್ಗೆ, ಅಸಹಾಯಕತೆಯ ಬಗ್ಗೆ ವಿವರಿಸಿದರೂ ಅವರು ಕಿವಿಗೊಡಲಿಲ್ಲ” ಎಂದು ಚೆಲ್ಲಕಣ್ಣು ಎಂಬವರು ವಿವರಿಸಿದ್ದಾರೆ.

ಈ ಗ್ರಾಮದಲ್ಲಿ 50 ದಲಿತ ಕುಟುಂಬಗಳಿದ್ದರೆ, 150ಕ್ಕೂ ಹೆಚ್ಚು ರೆಡ್ಡಿಯಾರ್ ಸಮುದಾಯದ ಜನರಿದ್ದಾರೆ. ಎರಡೂ ಸಮುದಾಯಗಳಿಗೆ ಇಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಆದರೆ ಮೇಲ್ಜಾತಿಯವರ ರುದ್ರಭೂಮಿಯಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಶೆಡ್ ಗಳಿದ್ದರೆ, ದಲಿತರಿಗೆ ಬರೀ ಭೂಮಿ ಮಾತ್ರವಿದೆ.

ಷಣ್ಮುಗವೇಲು ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡುವಂತೆ ಅವರ ಸಂಬಂಧಿಕರು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

“ಇಲ್ಲಿ ಭಾರೀ ಮಳೆ ಸುರಿಯುತ್ತಿದೆ. ನಮಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮುದಾಯಕ್ಕೆ ಸಹಾಯ ಮಾಡಿ” ಎಂದು ಒಬ್ಬರು ಬೇಡಿಕೊಳ್ಳುತ್ತಾರೆ. “ಅವರ ನಮ್ಮ ವಿರುದ್ಧ ತಾರತಮ್ಯ ನಡೆಸುತ್ತಿದ್ದಾರೆ. ಅವರಿಗೆ ಎಲ್ಲಾ ಸವಲತ್ತುಗಳಿವೆ. ನಮ್ಮನ್ನು ನೋಡಿ. ಮಳೆಯಲ್ಲಿ ನಿಂತಿದ್ದೇವೆ. ಅವನು ನನ್ನ ಸಹೋದರ” ಎಂದು ಷಣ್ಮುಗವೇಲು ಅವರ ಮೃತದೇಹವನ್ನು ತೋರಿಸುತ್ತಾ ಆ ವ್ಯಕ್ತಿ ಹೇಳುತ್ತಾರೆ.

“ಮೃತದೇಹಕ್ಕೆ ಬೆಂಕಿ ಕೊಟ್ಟಾಗ ಮಳೆ ಬಂದು ಎಲ್ಲಾ ಆರಿಹೋಯಿತು. ಮೃತದೇಹ ಅರ್ಧದಷ್ಟು ಸುಟ್ಟಿತ್ತು. ನಂತರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು” ಎಂದು ಚೆಲ್ಲಕಣ್ಣು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News