×
Ad

ಗಣೇಶೋತ್ಸವಕ್ಕಾಗಿ ದಿನವಿಡೀ ಮೀನು ಮಾರುಕಟ್ಟೆ ಬಂದ್ ಮಾಡಿ ಸಹಕರಿಸಿದ ಮೀನು ಮಾರಾಟಗಾರರು

Update: 2019-09-02 23:23 IST

ಮಂಗಳೂರು, ಸೆ.2: ಫರಂಗಿಪೇಟೆಯ ಸೇವಾಂಜಲಿ ವತಿಯಿಂದ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ  ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿನ ಮುಂಭಾಗದ ಮೀನು ಮಾರುಕಟ್ಟೆಯನ್ನು ಇಡೀ ದಿನ ಬಂದ್ ಮಾಡುವ ಮೂಲಕ ಮೀನು ಮಾರಾಟಗಾರರು ಸೌಹಾರ್ದ ಮೆರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಸಮೀಪ ಫರಂಗಿಪೇಟೆಯ ಮೀನು ಮಾರುಕಟ್ಟೆಯ ಇನ್ನೊಂದು ಕಡೆಯಲ್ಲಿ ಸೇವಾಂಜಲಿ ಮಂಟಪವಿದ್ದು, ಇಲ್ಲಿ ಪ್ರತಿ ವರ್ಷ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರೊಂದಿಗೆ ಇಂದು ಮಧ್ಯಾಹ್ನದವರೆಗೆ ಮಾರುಕಟ್ಟೆ ಬಂದ್ ಮಾಡಿ ಸಹಕರಿಸಬೇಕಾಗಿ ಕೋರಿದ್ದು, ಮಾರುಕಟ್ಟೆಯ ಎಲ್ಲಾ ಮೀನು ಮಾರಾಟಗಾರರು ಇಡೀ ದಿನ ಮಾರುಕಟ್ಟೆಯನ್ನು ಬಂದ್ ಮಾಡಿ ಸಹಕರಿಸಿದ್ದಾರೆ.

ಮೀನು ಮಾರಾಟಗಾರರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

"ಗಣೇಶೋತ್ಸವದ ಪ್ರಯುಕ್ತ ಇಂದು ಮಧ್ಯಾಹ್ನದ ವರೆಗೆ ಬಂದ್ ಮಾಡುವಂತೆ ನಾವು ಮೀನು ಮಾರಾಟಗಾರರೊಂದಿಗೆ ವಿನಂತಿಸಿದ್ದು, ಅವರು ಅದಕ್ಕೆ ಕೂಡಲೇ ಸಹಕಾರ ನೀಡಿದ್ದಾರೆ. ಅಲ್ಲದೆ ಅವರು ಇಂದು ಇಡೀ ದಿನ ಬಂದ್ ಮಾಡಿ ಸಹಕರಿಸಿದರು. ಇಲ್ಲಿ 37 ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿದ್ದು ಸೌಹಾರ್ದವಾಗಿ ನಡೆಯುತ್ತಿದೆ''.

- ಕೃಷ್ಣಕುಮಾರ್ ಪೂಂಜಾ
ಫರಂಗಿಪೇಟೆ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ,
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News