ವಾಯು ಪಡೆಗೆ 8 ಅಪಾಚೆ ಹೆಲಿಕಾಪ್ಟರ್ಗಳ ಸೇರ್ಪಡೆ

Update: 2019-09-03 18:45 GMT

ಪಠಾಣ್ಕೋಟ್, ಸೆ. 3: ಭಾರತೀಯ ವಾಯುಡೆಯ ಸಮರ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನವಾಗಿ ಅಮೆರಿಕ ನಿರ್ಮಿತ 8 ಅಪಾಚೆ ಎಎಚ್-64 ಇ ದಾಳಿ ಹೆಲಿಕಾಪ್ಟರ್ಗಳನ್ನು ಸೋಮವಾರ ಐಎಎಫ್ಗೆ ಸೇರ್ಪಡೆಗೊಳಿಸಲಾಗಿದೆ. ಪಠಾಣ್ಕೋಟ್ ವಾಯು ಪಡೆ ನೆಲೆಯಲ್ಲಿ ಎಎಚ್-64 ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ ಕಾರ್ಯಕ್ರಮದಲ್ಲಿ ವಾಯು ಪಡೆ ವರಿಷ್ಠ ಬಿ.ಎಸ್. ಧಾನೋವ ಮುಖ್ಯ ಅತಿಥಿಯಾಗಿದ್ದರು. 

ಈ ಸಂದರ್ಭ ಮಾತನಾಡಿದ ಧಾನೋವ, ಹೆಲಿಕಾಪ್ಟರ್ಗಳ ಸೇರ್ಪಡೆ ಭಾರತೀಯ ವಾಯುಪಡೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು. ಅಪಾಚೆ ಸೇರ್ಪಡೆಯಿಂದ ವಾಯು ಪಡೆಯ ಇತ್ತಿಚೆಗಿನ ತಲೆಮಾರಿನ ದಾಳಿ ಹೆಲಿಕಾಪ್ಟರ್ಗಳ ದಾಸ್ತಾನು ಮೇಲ್ದರ್ಜೀಕರಣಗೊಳ್ಳಲಿದೆ ಎಂದು ಹೇಳುವ ಮೂಲಕ ಅವರು ಅಪಾಚೆ ದಾಳಿ ಹೆಲಿಕಾಪ್ಟರ್ಗಳ ವ್ಯಾಪಕ ಶ್ರೇಣಿಯ ಸಾಮರ್ಥ್ಯಗಳ ಬಗ್ಗೆ ಪ್ರಶಂse ವ್ಯಕ್ತಪಡಿಸಿದರು. ‘‘ಭಾರತೀಯ ವಾಯು ಪಡೆ ಆಗ್ರಹಿಸಿದ್ದ ನಿಖರ ಗುಣಮಟ್ಟಕ್ಕೆ ಹೊಂದುವಂತೆ ಈ ಹೆಲಿಕಾಪ್ಟರ್ಗಳನ್ನು ಮಾರ್ಪಡಿಸಲಾಗಿದೆ. ನಿಗದಿತ ಅವಧಿಯಂತೆ ಹೆಲಿಕಾಪ್ಟರ್ಗಳು ದೊರಕಿರುವುದು ಸಂತಸ ಉಂಟು ಮಾಡಿದೆ’’ ಎಂದು ಅವರು ಹೇಳಿದರು. ಹಳೆಯದಾಗುತ್ತಿರುವ ಎಂಐ-35 ಹೆಲಿಕಾಪ್ಟರ್ ಸ್ಥಾನ ತುಂಬಲು ಅಪಾಚೆ ಹೆಲಿಕಾಪ್ಟರ್ಗಳನ್ನು ಖರೀದಿಸಲಾಯಿತು. ಜಗತ್ತಿನ ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅತ್ಯಾಧುನಿಕ ಬಹೋದ್ದೇಶಿತ ಹೆಲಿಕಾಪ್ಟರ್ ಇದಾಗಿದೆ.

ಇದು 80ರ ದಶಕದಿಂದ ಈಚೆಗೆ ಹಾರಾಟ ನಡೆಸುತ್ತಿದೆ. ಜಾಗತ್ತಿನಾದ್ಯಂತ ತನ್ನ ಯಶಸ್ವಿ ಕಾರ್ಯಾಚರಣೆಯನ್ನು ಸಾಬೀತುಪಡಿಸಿದೆ. ಗುಂಡು ಹಾರಿಸುವ ಹಾಗೂ ಎಟಿಜಿಎಂ (ಟ್ಯಾಂಕ್ ತಡೆ ನಿರ್ದೇಶಿತ ಕ್ಷಿಪಣಿ), ರಾಕೆಟ್ ಹಾಗೂ ಇತರ ಯುದ್ಧ ಸಾಮಗ್ರಿಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ತಿಳಿಸಿದರು. ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಸಾಮರ್ಥ ಹೊಂದಿರುವ ಹೆಲಿಕಾಪ್ಟರ್ ಭಾರತೀಯ ವಾಯು ಪಡೆಗೆ ಸೇರ್ಪಡೆಗೊಳ್ಳುತ್ತಿರುವುದು ಇದೇ ಮೊದಲು ಎಂದು ಧಾನೋವ ಹೇಳಿದರು.

‘‘ಇದರ ಬೆಂಕಿ ನಿಯಂತ್ರಣ ರ್ಯಾಡರ್ ಕೂಡ ಪ್ರಚಂಡ ಸಾಮರ್ಥ್ಯ ನೀಡಲಿದೆ. ಶಸ್ತ್ರಾಸ್ತ ವಿರೋಧಿ ಕಾರ್ಯಾಚರಣೆ, ವಾಯು ಪಡೆಯ ಶತ್ರುಗಳ ನಿಗ್ರಹ ಹಾಗೂ ಯುದ್ಧಭೂಮಿಯಲ್ಲಿ ವೈಮಾನಿಕ ದಾಳಿಯಲ್ಲಿ ಪಾತ್ರ-ಹೀಗೆ ಹಲವು ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ’’ ಎಂದು ಧಾನೋವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News