ದೇಶದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿ: ಐವನ್ ಡಿಸೋಜ

Update: 2019-09-03 08:56 GMT

ಮಂಗಳೂರು, ಸೆ.3: ದೇಶದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದ್ದು, ಕೇಂದ್ರ ಸರಕಾರ ಮಲಗಿದೆ ಎಂದು ವಿಧಾನ ಪರಿಷತ್‌ನ ಸದಸ್ಯರಾದ ಐವನ್ ಡಿಸೋಜ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ನಡುವೆ ಆರ್‌ಬಿಐನಿಂದ ಹಣವನ್ನು ಹಿಂಪಡೆದಿರುವ ಕೇಂದ್ರ ಸರಕಾರ ದೇಶವನ್ನು ಗಂಡಾಂತರಕ್ಕೆ ತಳ್ಳಿದೆ ಎಂದರು.

ದೇಶವು ತೀವ್ರವಾದ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದ ಮೂಲಕ ಕೇಂದ್ರ ಸರಕಾರ ಕಾರ್ಪೊರೇಟ್ ಪೆಕಂಪನಿಗಳಿಗೆ ಸಹಕರಿಸುತ್ತಿದೆ. ಈ ಮೂಲಕ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಕುತಂತ್ರ ನಡೆಸಿದೆ. ಬ್ಯಾಂಕ್‌ಗಳ ವಿಲೀನೀಕರಣ ದೇಶದ ಜನತೆಗೆ ಮಾಡುವ ದ್ರೋಹ ಎಂದು ಅವರು ಆಪಾದಿಸಿದರು.

ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ. ಈ ಬಗ್ಗೆ ಹೋರಾಟವನ್ನೂ ನಡೆಸಲಿದೆ. ಮಾತ್ರವಲ್ಲದೆ ಕಾಂಗ್ರೆಸ್ ನಿಯೋಗ ಶೀಘ್ರವೇ ಕೇಂದ್ರದ ಹಣಕಾಸು ಸಚಿವರನ್ನು ಈ ವಿಷಯದಲ್ಲಿ ಭೇಟಿ ಮಾಡಲಿದೆ ಎಂದು ಅವರು ಹೇಳಿದರು.

ಯುಪಿಎ ಸರಕಾರ ಆಡಳಿತದಲ್ಲಿದ್ದ ಸಂದರ್ಭ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದರೂ ಭಾರತ ಸ್ಥಿರವಾಗಿದ್ದು. ಆದರೆ ಇದೀಗ ಭಾರತದ ಜಿಡಿಪಿ ಶೇ.5ಕ್ಕಿಂತ ಕಡಿಮೆಯಾಗಿದೆ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣವನ್ನು ತರುವುದಾಗಿ ಹೇಳಿದ್ದ ಕೇಂದ್ರ ಸರಕಾರ ಇದೀಗ ಆರ್‌ಬಿಐ ಹಣವನ್ನೇ ತೆಗೆದಿದೆ. ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದ್ದರೂ ಅದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸಣ್ಣ ಉದ್ದಿಮೆಗಳು ಮುಚ್ಚುತ್ತಿವೆ. ಅಟೋಮೊಬೈಲ್, ಟೆಕ್ಸ್‌ಟೈಲ್ ಕಂಪೆನಿಗಳು ಉತ್ಪನ್ನವನ್ನು ಸ್ಥಗಿತಗೊಳಿಸುತ್ತಿವೆ. ಹೂಡಿಕೆಯಾಗುತ್ತಿಲ್ಲ. ವಿದೇಶಿ ಬಂಡವಾಳ ಬರುತ್ತಿಲ್ಲ. ಇಂತಹ ವ್ಯವಸ್ಥೆಯ ನಡುವೆಯೂ ಬ್ಯಾಂಕ್‌ಗಳ ವಿಲಿನೀಕರಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ಕೇಂದ್ರದ ಹಣಕಾಸು ಸಚಿವರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿಗೆ ಪ್ರಚಾರ ಮಾಡಿಯೇ ಗೊತ್ತು ಹೊರತು ವಿಚಾರ ಮಾಡುವುದು ತಿಳಿದಿಲ್ಲ. ಬಿಜೆಪಿಗೆ ಸಲಹೆ ಬರುವುದು ನಾಗಪುರದಿಂದ ಎಂಬಂತೆ ಕಾಣುತ್ತಿದೆ. ಅಲ್ಲಿರುವವರು ಪ್ರಚಾರಕರೇ ಹೊರತು ವಿಚಾರಕರಲ್ಲ. ಪ್ರಧಾನಿಯವರಿಗೆ ಇದಕ್ಕೆಲ್ಲಾ ಸಮಯವೇ ಇಲ್ಲ. ಅವರು ವಿದೇಶದ ಪ್ರವಾಸದಲ್ಲಿ ನಿರತರಾಗಿದ್ದಾರೆ ಎಂದು ಐವನ್ ಡಿಸೋಜ ಟೀಕಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News