ಮಂಗಳೂರು: ಜ್ಯುವೆಲ್ಲರಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು: ನಗರದ ಭವಂತಿ ರಸ್ತೆಯಲ್ಲಿನ ಜ್ಯುವೆಲ್ಲರಿಯೊಂದಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದು, ಮಂಗಳವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ಅನಿಲ್ ಶೇಟ್ ಎಂಬವರಿಗೆ ಸೇರಿದ ಜ್ಯುವೆಲ್ಲರಿ ಮಳಿಗೆಯಲ್ಲಿ ಕಳ್ಳತನವಾಗಿದೆ.
ಜ್ಯುವೆಲ್ಲರ್ ನ ಹಿಂಭಾಗದಲ್ಲಿ ಸುಮಾರು ಎರಡು ಚೌಕದ ಅಳತೆಯಲ್ಲಿ ಗೋಡೆ ಕೊರೆದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಗೋಡೆಯಲ್ಲಿ ಕಿಂಡಿ ಕೊರೆದ ದುಷ್ಕರ್ಮಿಗಳು ಒಳ ಪ್ರವೇಶಿಸಿ ಚಿನ್ನಾಭರಣವಿದ್ದ ಸಣ್ಣ ಬಾಕ್ಸ್ ತೆರೆದು ಚಿನ್ನಾಭರಣ ಕಳವು ಮಾಡಿದ್ದಾರೆ. ಬಾಕ್ಸ್ ಗಳ ಕವರ್ ಗಳನ್ನು ಮಳಿಗೆಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.
ಗಣೇಶ ಚತುರ್ಥಿ ನಿಮಿತ್ತ ಜ್ಯುವೆಲ್ಲರಿ ಮಳಿಗೆಯನ್ನು ರವಿವಾರ ಮಧ್ಯಾಹ್ನದ ನಂತರ ಕೀಲಿ ಹಾಕಲಾಗಿತ್ತು. ಸೋಮವಾರವೂ ಅಂಗಡಿ ಬಂದ್ ಆಗಿತ್ತು. ಮಂಗಳವಾರ ಮಳಿಗೆಯ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಮಳಿಗೆಯ ಸಿಬ್ಬಂದಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮಳಿಗೆಯ ಮಾಲಕರು ಕಾರವಾರಕ್ಕೆ ರವಿವಾರವೇ ತೆರಳಿದ್ದು, ಸಂಜೆ 4 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕವೇ ನಷ್ಟದ ಪ್ರಮಾಣ ಗೊತ್ತಾಗಲಿದೆ.
ಬೆರಳಚ್ಚು ತಜ್ಞರು ಆಗಮಿಸಿ, ಸಿಬ್ಬಂದಿಯ ಫಿಂಗರ್ ಪ್ರಿಂಟ್ಸ್ ಪಡೆಯುತ್ತಿದ್ದಾರೆ. ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.
ಈ ಕುರಿತು ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.