ತಾಯಿಯ ಮ್ಯಾನೇಜರ್ ಗಳು ಆಕೆಯನ್ನು ಸಂಪರ್ಕಿಸಿದರೆ ಕಾಲು ಮುರಿಯುವುದಾಗಿ ಬೆದರಿಸಿದ್ದಾರೆ: ರಾನು ಮೊಂಡಲ್ ಪುತ್ರಿ
ಹೊಸದಿಲ್ಲಿ: ತನ್ನ ತಾಯಿ ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದರೆಂದು ತನಗೆ ತಿಳಿದಿರಲಿಲ್ಲ ಎಂದು ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ರಾನು ಮೊಂಡಲ್ ಹಾಡಿದ್ದ ಲತಾ ಮಂಗೇಶ್ಕರ್ ಹಾಡು’ ಏಕ್ ಪ್ಯಾರ್ ಕಾ ನಗ್ಮಾ ಹೈ’ ಇಂಟರ್ನೆಟ್ ನಲ್ಲಿ ವೈರಲ್ ಆದ ಕೆಲ ವಾರಗಳ ನಂತರ ಆಕೆಯ ಪುತ್ರಿ ಎಲಿಜಬೆತ್ ಸತಿ ರಾಯ್ ಹೇಳಿದ್ದಾರೆ.
ತಾಯಿಯನ್ನು ಆಗಾಗ ಭೇಟಿಯಾಗದೇ ಇದ್ದರೂ ಆಕೆಯ ಜತೆ ತಾನು ಸಂಪರ್ಕದಲ್ಲಿದ್ದುದಾಗಿಯೂ ಸತಿ ಹೇಳಿಕೊಂಡಿದ್ದಾರೆ. ತನ್ನ ತಾಯಿಯನ್ನು ನೋಡಿಕೊಳ್ಳುತ್ತಿರುವ ರಾಣಾಘಾಟ್ ನ ಅಮ್ರ ಶೋಭೈ ಶೊಯ್ಟಾನ್ ಕ್ಲಬ್ಬಿನ ಸದಸ್ಯರು ತಾಯಿಯ ಜತೆ ಸಂಪರ್ಕ ಹೊಂದದಂತೆ ಮಾಡಿದ್ದಾರೆ ಹಾಗೂ ಬೆದರಿಸಿದ್ದಾರೆ ಎಂದು ಆಕೆ ದೂರಿದ್ದಾರೆ. “ಕ್ಲಬ್ ಸದಸ್ಯರಾದ ತಪನ್ ಹಾಗೂ ಅತೀಂದ್ರ ನನ್ನ ತಾಯಿಯ ಸ್ವಂತ ಪುತ್ರರಂತೆ ಇದ್ದಾರೆ. ನಾನು ನನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದರೆ ನನ್ನ ಕಾಲು ಮುರಿದು ಹೊರಗೆಸೆಯುವುದಾಗಿ ಅವರು ಬೆದರಿಸಿದ್ದಾರೆ, ತಾಯಿಯ ಜತೆ ಫೋನ್ ನಲ್ಲಿ ಮಾತನಾಡಲೂ ಬಿಡುತ್ತಿಲ್ಲ. ನನ್ನ ವಿರುದ್ಧ ತಾಯಿಯನ್ನು ಬ್ರೈನ್ ವಾಶ್ ಮಾಡುತ್ತಿದ್ದಾರೆ. ನಾನು ನಿಸ್ಸಹಾಯಕಿ'' ಎಂದು ಆಕೆ ಹೇಳಿದ್ದಾರೆ.
ತನ್ನ ತಾಯಿಯನ್ನು ನೋಡಿಕೊಳ್ಳದೇ ಇರುವುದಕ್ಕೆ ನೆಟ್ಟಿಗರಿಂದ ಟೀಕೆಗೊಳಗಾದ ನಂತರ ಸತಿ ಮೇಲಿನ ಹೇಳಿಕೆ ನೀಡಿದ್ದಾರೆ. ತಾಯಿಯನ್ನು ತನ್ನ ಕೈಲಾದಷ್ಟು ನೋಡಿಕೊಳ್ಳಲು ಶ್ರಮಿಸುತ್ತಿದ್ದುದಾಗಿ ಹಾಗೂ ತನಗೆ ತನ್ನದೇ ಆದ ಸಮಸ್ಯೆಗಳಿವೆ ಎಂದು ಆಕೆ ಹೇಳಿಕೊಂಡಿದ್ದಾರೆ.
ರಾನು ಮೊಂಡಲ್‍ಳ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿರುವ ಸತಿ ತಾನು ವಿಚ್ಛೇದಿತೆಯಾಗಿದ್ದು, ಒಂದು ಸಣ್ಣ ಕಿರಾಣಿ ಅಂಗಡಿ ನಡೆಸಿ ಮಗನನ್ನು ಸಲಹುತ್ತಿದ್ದುದಾಗಿ, ಆಗಾಗ ತಾಯಿಗೆ ಸಂಬಂಧಿಯೊಬ್ಬರ ಖಾತೆಯ ಮುಖಾಂತರ ಹಣ ಕಳುಹಿಸುತ್ತಿದ್ದುದಾಗಿ ಆಕೆ ಹೇಳಿದ್ದಾರೆ. ತಾಯಿಯನ್ನು ತನ್ನ ಜತೆಗಿರುವಂತೆ ಹಲವಾರು ಬಾರಿ ವಿನಂತಿಸಿದ ಹೊರತಾಗಿಯೂ ಆಕೆ ನಿರಾಕರಿಸಿದ್ದಾರೆಂದು ಸತಿ ಹೇಳಿಕೊಂಡಿದ್ದಾರೆ.
ತಾನು ರಾನು ಮೊಂಡಲ್‍ಳ ಮೊದಲ ವಿವಾಹದಿಂದ ಹುಟ್ಟಿದವಳು ಹಾಗೂ ತನಗೊಬ್ಬ ಹಿರಿಯ ಸೋದರನಿದ್ದಾನೆ ಎಂದು ಸತಿ ತಿಳಿಸಿದ್ದಾರೆ. ರಾನು ಮೊಂಡಲ್‍ಗೆ ಎರಡನೇ ವಿವಾಹದಿಂದ ಇನ್ನಿಬ್ಬರು ಮಕಜ್ಕಳಿದ್ದಾರೆ. ಅವರ ಜತೆ ಸತಿಗೆ ಸಂಪರ್ಕವಿಲ್ಲ. “ಅವರೇಕೆ ತಾಯಿಯ ಜವಾಬ್ದಾರಿ ಹೊರಬಾರದು? ಎಲ್ಲರೂ ನನ್ನನ್ನೇ ಏಕೆ ದೂರುತ್ತಿದ್ದಾರೆ?'' ಎಂದು ಆಕೆ ಪ್ರಶ್ನಿಸುತ್ತಾರೆ.
ಖ್ಯಾತ ಗಾಯಕ ಹಿಮೇಶ್ ರೆಶಮಿಯಾ ಈಗಾಗಲೇ ರಾನು ಮೊಂಡಲ್ ಅವರಿಗೆ ಸೂಪರ್ ಸ್ಟಾರ್ ಸಿಂಗರ್ ಗೆ ಆಹ್ವಾನ ನೀಡಿದ್ದಾರಲ್ಲದೆ ತಮ್ಮ ಮುಂದಿನ ಚಿತ್ರ ‘ಹ್ಯಾಪ್ಪಿ ಹಾರ್ಡಿ ಎಂಡ್ ಹೀರ್’ ಗಾಗಿ ಆಕೆಯಿಂದ ‘ಆದತ್’ ಹಾಗೂ ‘ತೇರಿ ಮೇರಿ ಕಹಾನಿ’ -ಎರಡು ಹಾಡುಗಳನ್ನು ರೆಕಾರ್ಡ್ ಮಾಡಿಸಿದ್ದಾರೆ.