ಗುಜರಾತ್‍ನ ವಜ್ರೋದ್ಯಮ ಸಂಕಷ್ಟದಲ್ಲಿ; 60,000 ಕಾರ್ಮಿಕರಿಗೆ ಉದ್ಯೋಗ ನಷ್ಟ
ಅಹ್ಮದಾಬಾದ್: ಗುಜರಾತ್ ನ ವಜ್ರೋದ್ಯಮ ಭಾರೀ ಸಂಕಷ್ಟದಲ್ಲಿದ್ದು ಸುಮಾರು 60,000 ಉದ್ಯೋಗಿಗಳನ್ನು ರಾಜ್ಯಾದ್ಯಂತ ಕೆಲಸದಿಂದ ಕೈಬಿಡಲಾಗಿದ್ದರೆ, ಸೂರತ್ ನಗರವೊಂದರಲ್ಲಿಯೇ 13,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ವಜ್ರೋದ್ಯಮವು ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ಸಮಸ್ಯೆಯ ಸುಳಿಯಲ್ಲಿದೆ. ಹಲವಾರು ವಜ್ರದ ಫ್ಯಾಕ್ಟರಿಗಳು ತಮ್ಮ ಮುಖ್ಯ ಗೇಟುಗಳ ಹೊರಗಡೆ ತೂಗಿಸಲಾಗಿರುವ ನೋಟಿಸಿನಲ್ಲಿ "ಹಣವನ್ನು ಜಾಗರೂಕತೆಯಿಂದ ಖರ್ಚು ಮಾಡಿ, ನವರಾತ್ರಿಗೆ ದೊಡ್ಡ ರಜೆಯಿರುವ ಸಾಧ್ಯತೆಯಿದೆ,'' ಎಂದು ಬರೆಯಲಾಗಿದೆ.
ರಾಜ್ಯದಲ್ಲಿ ಸುಮಾರು 15,000 ದೊಡ್ಡ ಹಾಗೂ ಸಣ್ಣ ವಜ್ರೋದ್ಯಮಗಳಿದ್ದು ಸುಮಾರು ಏಳು ಲಕ್ಷ ಜನರು ಈ ಉದ್ಯಮವನ್ನೇ ತಮ್ಮ ಜೀವನೋಪಾಯಕ್ಕಾಗಿ ನಂಬಿದ್ದಾರೆ. ಸುಮಾರು 3,500 ವಜ್ರೋದ್ಯಮಗಳಿರುವ ಸೂರತ್ ನಲ್ಲಿ ಆರು ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.
2017ರ ದೀಪಾವಳಿ ನಂತರ ರಾಜ್ಯದ ಶೇ 40ರಷ್ಟು ವಜ್ರೋದ್ಯಮ ಬಾಗಿಲು ಮುಚ್ಚಿತ್ತು. 2018ರಲ್ಲಿ 750 ಕುಶಲ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರೆ, ಗುಜರಾತ್ ವಜ್ರ ಉದ್ಯೋಗಿಗಳ ಯೂನಿಯನ್ ಪ್ರಕಾರ ಕೆಲಸ ಕಳೆದುಕೊಂಡ 10ಕ್ಕೂ ಹೆಚ್ಚು ಮಂದಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೀರವ್ ಮೋದಿ, ಮೆಹುಲ್ ಚೊಕ್ಸಿ ಹಾಗೂ ಜತಿನ್ ಮೆಹ್ತಾ ವಂಚನೆ ಪ್ರಕರಣದ ನಂತರ ಬ್ಯಾಂಕುಗಳು ವಜ್ರೋದ್ಯಮಗಳಿಗೆ ಸಾಲ ನೀಡುತ್ತಿಲ್ಲವಾದುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದು ಸಾಲದೆಂಬಂತೆ ಅಮಾನ್ಯೀಕರಣ ಹಾಗೂ ಜಿಎಸ್‍ಟಿ ಕೂಡ ವಜ್ರೋದ್ಯಮವನ್ನು ತೀವ್ರವಾಗಿ ಬಾಧಿಸಿ ಭಾರೀ ನಷ್ಟಕ್ಕೆ ಕಾರಣವಾಗಿದೆ.
ಹಲವು ಫ್ಯಾಕ್ಟರಿಗಳು ಕೆಲಸದ ಅವಧಿಯನ್ನು ಕಡಿಮೆಗೊಳಿಸಿದ್ದು, ಇನ್ನು ಕೆಲವು ಮೂರು ಶಿಫ್ಟ್ ಬದಲು ಒಂದೇ ಶಿಪ್ಟ್ ನಡೆಸುತ್ತಿವೆ. ಸಿಂಥೆಟಿಕ್ ವಜ್ರ ಮಾರುಕಟ್ಟೆ ಪ್ರವೇಶಿಸಿರುವುದೂ ವಜ್ರೋದ್ಯಮ ಸಮಸ್ಯೆಯಲ್ಲಿ ಸಿಲುಕಲು ಕಾರಣವೆಂದು ಈ ಉದ್ಯಮದಲ್ಲಿರುವ ಕೆಲವರು ಹೇಳುತ್ತಾರೆ.
ವಜ್ರೋದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮಗೆ ಮುಂದೇನು ಕಾದಿದೆಯೆಂದು ತಿಳಿಯದೆ ಅನಿಶ್ಚಿತತೆಯಲ್ಲಿಯೇ ದಿನ ದೂಡುವಂತಾಗಿದೆ, ವಜ್ರ ಕೆಲಸಗಾರರು ಸಂಘಟಿತರಾಗಿಲ್ಲದೇ ಇರುವುದರಿಂದ ಅವರ ಹಕ್ಕುಗಳಿಗಾಗಿ ದನಿಯೆತ್ತುವವರೂ ಯಾರೂ ಇಲ್ಲವಾಗಿದೆ.
ವಜ್ರ ಕೆಲಸಗಾರರ ಯೂನಿಯನ್ ಅಧ್ಯಕ್ಷ ರನ್ಮಲ್ ಜಿಲರಿಯ ಅವರು ಹೇಳುವಂತೆ ವಜ್ರೋದ್ಯಮದಲ್ಲಿ ಉದ್ಯೋಗ ಪರಿಸ್ಥಿತಿ ಬಹಳ ನಿರಾಶಾದಾಯಕವಾಗಿದೆ. ಉದ್ಯೋಗಿಗಳನ್ನು ಯಾವುದೇ ಪೂರ್ವ ನೋಟಿಸ್ ಇಲ್ಲದೆ ಹಾಗೂ ಸೂಕ್ತ ಸವಲತ್ತುಗಳನ್ನು ನೀಡದೆ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಕಳೆದುಕೊಂಡ ಉದ್ಯೋಗಿಗಳ ಕುರಿತ ದತ್ತಾಂಶವನ್ನು ಸರಕಾರಕ್ಕೆ ಸಲ್ಲಿಸಿ ಅಂತಹ ಉದ್ಯೋಗಿಗಳ ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನು ಭರಿಸುವಂತೆ ಸರಕಾರವನ್ನು ಕೇಳಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.