ಸರಕಾರಿ ಸೌಲಭ್ಯಗಳಿಂದ ಹಾಲಕ್ಕ ಸಮುದಾಯ ವಂಚಿತ: ಸುಕ್ರಿ ಬೊಮ್ಮ ಗೌಡ
ಮಂಗಳೂರು, ಸೆ.3: ತಾನು ಪ್ರತಿನಿಧಿಸುವ ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಸಮುದಾಯಕ್ಕೆ ಸೇರ್ಪಡೆಗೊಳಿಸುವಂತೆ ಸರಕಾರವನ್ನು ಆಗ್ರಹಿಸಲಾಗಿದೆ. ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಜಾನಪದ ಸಾಧಕಿ, ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಹೇಳಿದ್ದಾರೆ.
ಮಂಗಳೂರಿನ ಮಿನಿ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಲಕ್ಕಿ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗದೆ ಒಂದು ರೀತಿಯಲ್ಲಿ ಹಾಲಕ್ಕಿ ಸಮುದಾಯ ನಿರ್ಲಕ್ಷಿತರ ಸಾಲಿಗೆ ಸೇರುತ್ತಿದೆ ಎಂದು ಬೇಸರಿಸಿದರು. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಹಾಲಕ್ಕಿ ಜನಾಂಗದ ಜೀವನಮಟ್ಟ ಸುಧಾರಿಸಲು ಯಾವುದೇ ಸರ್ಕಾರಗಳು ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ಎಂದು ಹೇಳಿದರು.
ಹಾಲಕ್ಕಿ ಜನಾಂಗದ ಅಭಿವೃದ್ಧಿ ಕುರಿತು ಗಮನ ನೀಡುವಂತೆ ದೆಹಲಿಗೆ ತೆರಳಿದಾಗ ಪ್ರಧಾನ ಮಂತ್ರಿಗೂ ಹೇಳಿದ್ದೆ. ಅಲ್ಲದೆ ಇತರೆ ಸಚಿವರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೆ. ಆದರೆ ಕಳೆದ ಐದಾರು ವರ್ಷಗಳಿಂದ ಈ ಬಗ್ಗೆ ಹೇಳುತ್ತಲೇ ಬಂದಿದ್ದರೂ ಇದುವರೆಗೆ ಯಾವುದೇ ಪೂರಕ ಸ್ಪಂದನ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದೊರಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಾಲು ಮತ್ತು ಅಕ್ಕಿಯನ್ನು ಬೆಳೆಯುತ್ತಾ ಜೀವನ ಸಾಗಿಸುತ್ತಿರುವ ಹಾಲಕ್ಕಿಗಳಾದ ನಮ್ಮಲ್ಲಿ ಶೈಕ್ಷಣಿಕವಾಗಿ ಮಕ್ಕಳು ಮುನ್ನಡೆದಿಲ್ಲ. ಆರೋಗ್ಯದಲ್ಲೂ ಹಾಲಕ್ಕಿ ಜನಾಂಗದ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುಕ್ರಿ ಬೊಮ್ಮ ಗೌಡ ಹೇಳಿದರು.
ಉತ್ತರ ಕನ್ನಡದಲ್ಲಿ ಹಾಲಕ್ಕಿ ಜನಾಂಗದವರ ಜಾಗವನ್ನು ಬಲಿಷ್ಠ ವ್ಯಕ್ತಿಗಳು ಅತಿಕ್ರಮಿಸಿದ್ದಾರೆ. ಇದರಿಂದ ಹಾಲಕ್ಕಿ ಸಮುದಾಯಕ್ಕೆ ನೆಲೆ ಇಲ್ಲದಂತಾಗಿದೆ. ಎಲ್ಲ ಕಡೆಗಳಲ್ಲೂ ಹಾಲಕ್ಕಿ ಸಮುದಾಯವನ್ನು ಅಲಕ್ಷಿಸುವಂತಾಗಿದೆ ಎಂದರು.
ಸಮಗ್ರ ದಾಖಲೀಕರಣದ ಅಗತ್ಯ
ಹಾಲಕ್ಕಿ ಜನಾಂಗದ ಕುರಿತು ನಾನೇ ಆಶುವಾಗಿ ರಚಿಸಿದ ಸುಮಾರು 4 ಸಾವಿರಕ್ಕೂ ಮಿಕ್ಕಿದ ಹಾಡುಗಳ ಧ್ವನಿ ಮುದ್ರಣವನ್ನು ಆಕಾಶವಾಣಿಗಳು ಮಾಡಿವೆ. ಆದರೆ ಅವುಗಳ ಸಮಗ್ರ ದಾಖಲೀಕರಣ ಆಗಿಲ್ಲ. ಜಾನಪದ ವಿವಿ ಒಂದು ಪುಸ್ತಕ ಹೊರತಂದಿರುವುದನ್ನು ಹೊರತುಪಡಿಸಿದರೆ, ಬೇರೆ ಯಾವ ಕಾರ್ಯವೂ ಕೈಗೂಡಿಲ್ಲ ಎಂದರು.
ಶಿರಸಿ, ಕುಮಟಾ, ಅಂಕೋಲ, ಕಾರವಾರ ಸೇರಿದಂತೆ ವಿವಿಧ ಕಡೆಗಳಲ್ಲಿ ಮದ್ಯಪಾನ ವಿರೋಧಿ ಹೋರಾಟ ನಡೆಸಿದ್ದೇನೆ. ಇದನ್ನು ವ್ಯಾಪಕ ಜನಬೆಂಬಲ ಸಿಕ್ಕಿದ ಕಾರಣ ಈಗ ನಮ್ಮ ಊರಿನಲ್ಲಿ ಮದ್ಯಪಾನದ ಪ್ರಶ್ನೆಯೇ ಇಲ್ಲ ಎಂದವರು ಹೇಳಿದರು.
ನಮ್ಮ ನೆಲ, ಜಲವನ್ನು ಉಳಿಸಿಕೊಳ್ಳಬೇಕಾದ್ದು ಅತ್ಯಗತ್ಯ. ಸ್ವಂತ ಮಕ್ಕಳನ್ನು ಸಾಕಿ ಸಲಹಿದಂತೆ ಮರ ಗಿಡಗಳನ್ನು ಪೋಷಿಸಬೇಕು. ಪರಿಸರ ನಾಶಕ್ಕೆ ಆಸ್ಪದ ನೀಡದೆ ಮುಂದಿನ ತಲೆಮಾರಿಗೆ ಪರಿಸರವನ್ನು ಉಳಿಸಿ ಬೆಳೆಸುವ ಮನವರಿಕೆ ಮಾಡಬೇಕು ಎಂದರು.
ಗೋಷ್ಠಿಯಲ್ಲಿ ಪರಿಸರ ಹೋರಾಟಗಾರ, ಕಲಾವಿದ ದಿನೇಶ್ ಹೊಳ್ಳ ಉಪಸ್ಥಿತರಿದ್ದರು.