ವೈದ್ಯರ ಮೇಲೆ ಹಲ್ಲೆ ನಡೆಸಿದರೆ 10 ವರ್ಷ ಜೈಲು, 10 ಲಕ್ಷ ರೂ. ದಂಡ
ಹೊಸದಿಲ್ಲಿ, ಸೆ.3: ಕರ್ತವ್ಯದಲ್ಲಿರುವ ವೈದ್ಯರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ಕರಡು ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ 10 ವರ್ಷದವರೆಗೆ ಜೈಲುಶಿಕ್ಷೆ ಅಥವಾ 10 ಲಕ್ಷ ರೂ. ದಂಡ ವಿಧಿಸುವ ಶಿಫಾರಸು ಮಾಡಲಾಗಿದೆ.
ಆರೋಗ್ಯಸೇವೆ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆ(ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ ) ಕರಡು ಮಸೂದೆ 2019ರಲ್ಲಿ ಯಾವುದಾದರೂ ಸುಧಾರಣೆ ಆಗಬೇಕಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯ ಕೋರಿದೆ. ವೈದ್ಯರ ಮೇಲಿನ ಹಲ್ಲೆ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಮಸೂದೆ ಅಂತಿಮಗೊಳ್ಳುವ ಮೊದಲು, 30 ದಿನದೊಳಗೆ ಸಾರ್ವಜನಿಕರು ಸಲಹೆಗಳನ್ನು ನೀಡಬೇಕಿದೆ ಎಂದು ಇಲಾಖೆ ತಿಳಿಸಿದೆ.
ಹಿಂಸಾಚಾರದ ಕೃತ್ಯವನ್ನು ನಿರ್ಬಂಧಿಸುವುದು, ಇಂತಹ ಹಿಂಸಾ ಕೃತ್ಯಗಳನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಿ ಶಿಕ್ಷೆ ನೀಡುವುದು ಮತ್ತು ಗಾಯಗೊಂಡ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪರಿಹಾರ ಒದಗಿಸುವ ಅಗತ್ಯವಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಮೃತಪಟ್ಟಾಗ ವೈದ್ಯರ ನಿರ್ಲಕ್ಷ ಎಂದು ಆರೋಪಿಸಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, 3 ದಿನದ ಹಿಂದೆ ಅಸ್ಸಾಂನಲ್ಲಿ 73 ವರ್ಷದ ನಿವೃತ್ತ ವೈದ್ಯರ ಮೇಲೆ ಚಹಾ ಎಸ್ಟೇಟ್‌ನಲ್ಲಿ ಹಲ್ಲೆ ನಡೆಸಲಾಗಿದೆ. ಹಂಗಾಮಿ ನೌಕರನೊಬ್ಬ ಚಹಾ ಎಸ್ಟೇಟ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ವೇಳೆ ವೈದ್ಯರು ಆಸ್ಪತ್ರೆಯಲ್ಲಿರಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ.
ತಮ್ಮನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡು ಹಲ್ಲೆ ನಡೆಯುತ್ತಿದೆ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆದಾಗ ಆ ಆಸ್ಪತ್ರೆಗೆ ಹೆಚ್ಚುವರಿ ಭದ್ರತಾ ಸಿಬಂದಿ ನೇಮಿಸುವುದು ಶಾಶ್ವತ ಪರಿಹಾರವಲ್ಲ. ಹಲ್ಲೆಕೋರರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಬೇಕೆಂದು ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿದ್ದವು.