ಶಂಕರಪುರ ಗಣೇಶೋತ್ಸವದಲ್ಲಿ ಸರ್ವಧರ್ಮ ಸಮಾವೇಶ

Update: 2019-09-03 14:11 GMT

ಶಿರ್ವ, ಸೆ.3: ಭಾರತೀಯ ಸಂಸ್ಕೃತಿ ವಿಶಿಷ್ಟವಾಗಿದ್ದು, ಸಮಸ್ತ ಮನುಕುಲವನ್ನು ಒಂದಾಗಿಸಿ, ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದೆ. ಇದು ಸರ್ವ ಸಮಾನತೆಯ ಧ್ಯೋತಕ ಎಂದು ಸಮಾಜ ಸೇವಕ ಸಾಸ್ತಾನ ಇಬ್ರಾಹಿಮ್ ಸಾಹೇಬ್ ಹೇಳಿದ್ದಾರೆ.

ಶಂಕರಪುರ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ಸರ್ವ ಧರ್ಮ ಸೌಹಾರ್ದ ಸಮಿತಿ ಮತ್ತು ಗಣೇಶೋತ್ಸವ ಸಮಿತಿಯ ವತಿಯಿಂದ ಸೋಮ ವಾರ ಆಯೋಜಿಸಲಾದ ಸರ್ವಧರ್ಮ ಸೌಹಾರ್ದ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಉತ್ಸವಗಳು ಆನಂದ, ಸಡಗರ, ಸಂಭ್ರಮವನ್ನು ವೃದ್ಧಿಸುತ್ತವೆ. ಇಸ್ಲಾಂ ಅನುಸರಣೆ, ವಿಧೇಯತೆ ಮತ್ತು ಶಾಂತಿ ಸೌಹಾರ್ದತೆಯನ್ನು ಬೋಧಿಸುವವ ಧರ್ಮವೇ ಹೊರತು ಹಿಂಸೆಯನ್ನು ಎಂದಿಗೂ ಪ್ರಚೋದಿಸುವುದಿಲ್ಲ. ಸ್ವಾರ್ಥ ಚಿಂತನ, ಭೋಗ ಜೀವನದ ಮನಸ್ಥತಿಯಲ್ಲಿ ಬೆಳೆದ ಅಧಿಕ ಸ್ವಾರ್ಥಿ ಮನುಷ್ಯ, ಸಮಾಜ ಕಂಟಕನಾಗಿ ಬೆಳೆಯುತ್ತಿರುವುದು ದುರಂತ ಎಂದರು.

ಮಂಗಳೂರು ಧರ್ಮ ಜಾಗರಣ ವೇದಿಕೆಯ ಸಹ ಸಂಯೋಜಕ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ, ಧರ್ಮ ಧರ್ಮಗಳ ನಡುವೆ ಗೋಡೆಗಳ ನಿರ್ಮಾಣವಾಗುತ್ತಿರುವ ಈ ಸನ್ನಿವೇಶದಲ್ಲಿ ಸರ್ವಧರ್ಮ ಸಮಾವೇಶಗಳು ಒಂದು ಬೆಳಕಾಗಿದೆ. ರಾಷ್ಟ್ರ ಧರ್ಮ ಪ್ರತಿಪಾದಕರಾಗಿ ಎಲ್ಲರನ್ನೂ ಒಂದು ಗೂಡಿಸಿದ ಬಾಲಗಂಗಾಧರ ತಿಲಕರ ಸಂಘಟನಾ ಶಕ್ತಿಯ ಪ್ರತೀಕವಾಗಿರುವ ಗಣೇಶೋತ್ಸವಗಳು ಎಲ್ಲಾ ಧರ್ಮ, ಪಕ್ಷ, ಪಂಗಡದವರನ್ನೂ ಒಂದಾಗಿಸಿದೆ ಎಂದು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಶಂಕರಪುರ ಧರ್ಮಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ.ಪರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ, ಶಂಕರಪುರ ಸೌಹಾರ್ದತೆಯ ನಾಡಾಗಿದ್ದು, ಎಲ್ಲ ಮತಧರ್ಮಗಳ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸುವ ಮೂಲ ಇತರರಿಗೆ ಮಾದರಿಯಾಗಿದೆ ಎಂದರು.

ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ದಿವ್ಯಜ್ಯೋತಿ ನಿರ್ದೇಶಕ ರೆ.ಪಾ.ಸ್ಟೀವನ್ ಡಿಸೋಜ ಸಂದೇಶ ನೀಡಿದರು. ಸರ್ವಧರ್ಮ ಸೌಹಾರ್ದ ಸಮಿತಿಯ ಸದಸ್ಯ ಆಂಟನಿ ಡೇಸಾ ಪ್ರಾ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ಅಮೀನ್ ವಂದಿಸಿದರು. ಸಂತೋಷ್ ಕುಮಾರ್ ಮತ್ತು ಮೋಹನ ದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News