×
Ad

ಆ್ಯಂಬುಲೆನ್ಸ್ ನಿರಾಕರಿಸಿದ ಆಸ್ಪತ್ರೆ: ಪುತ್ರಿಯ ಮೃತದೇಹ ಹೊತ್ತು ಸಾಗಿಸಿದ ತಂದೆ

Update: 2019-09-03 19:42 IST

ತೆಲಂಗಾಣ, ಸೆ.3: ಮಗಳ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಒದಗಿಸಲು ಆಸ್ಪತ್ರೆಯವರು ನಿರಾಕರಿಸಿದ ಕಾರಣ ಬಡ ವ್ಯಕ್ತಿಯೊಬ್ಬ ಕೈಯಲ್ಲಿ ಹೊತ್ತುಕೊಂಡು ಮೃತದೇಹವನ್ನು ಮನೆಗೆ ಸಾಗಿಸಿದ ಘಟನೆ ತೆಲಂಗಾಣದ ಕರೀಮ್‌ನಗರ ಜಿಲ್ಲೆಯಲ್ಲಿ ವರದಿಯಾಗಿದೆ.

ಸಂಪತ್ ಕುಮಾರ್ ಎಂಬವರು ತನ್ನ 7 ವರ್ಷದ ಪುತ್ರಿ ಕೋಮಲತಾ ಎಂಬಾಕೆಯನ್ನು ಮಂಗಳವಾರ ಕರೀಂನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಸಂಪತ್‌ಕುಮಾರ್ ಖಾಸಗಿ ಆ್ಯಂಬುಲೆನ್ಸ್‌ಗೆ ಹಣ ಪಾವತಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ ಆಸ್ಪತ್ರೆಯವರಲ್ಲಿ ಆ್ಯಂಬುಲೆನ್ಸ್ ಒದಗಿಸುವಂತೆ ಕೋರಿದ್ದಾರೆ. ಆದರೆ ಅವರು ನಿರಾಕರಿಸಿದ್ದರಿಂದ ಅನ್ಯಮಾರ್ಗವಿಲ್ಲದೆ ಕೈಯಲ್ಲಿ ಮಗಳ ಮೃತದೇಹವನ್ನು ಹಿಡಿದುಕೊಂಡು ಎದೆಗೆ ಒರಗಿಸಿಕೊಂಡು ಕಾಲ್ನಡಿಗೆಯಲ್ಲಿ 50 ಕಿ.ಮೀ ದೂರವಿರುವ ಮನೆಯತ್ತ ಹೊರಟಿದ್ದರು.

ರಸ್ತೆಯಲ್ಲಿ ಬಾಲಕಿಯ ಮೃತದೇಹವನ್ನು ಹೊತ್ತುಕೊಂಡು ಸಾಗುತ್ತಿದ್ದ ಸಂಪತ್‌ ಕುಮಾರ್ ‌ನನ್ನು ಕಂಡ ರಿಕ್ಷಾ ಚಾಲಕನೊಬ್ಬ ಆತನ ಮೇಲೆ ಕನಿಕರಗೊಂಡು ಮನೆಯವರೆಗೆ ಕರೆದೊಯ್ದಿದ್ದಾನೆ ಎಂದು ವರದಿಯಾಗಿದೆ.

ಆದರೆ ಸಂಪತ್ ಕುಮಾರ್‌ ಗೆ ಆ್ಯಂಬುಲೆನ್ಸ್ ನಿರಾಕರಿಸಲಾಗಿದೆ ಎಂಬುದನ್ನು ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ. ಆ್ಯಂಬುಲೆನ್ಸ್ ಹೊರಗೆ ಹೋಗಿದ್ದು ಸ್ವಲ್ಪ ಹೊತ್ತಿನಲ್ಲಿ ಬರುತ್ತದೆ. ಅದುವರೆಗೆ ಕಾಯಬೇಕು ಎಂದಾಗ ಆತ ಅವಸರ ತೋರಿ ಮೃತದೇಹವನ್ನು ಹೊತ್ತುಕೊಂಡೇ ಸಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News