Big Breaking News: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಧನ

Update: 2019-09-03 16:47 GMT

ಹೊಸದಿಲ್ಲಿ, ಸೆ. 3: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.

ನೋಟು ರದ್ಧತಿ ವೇಳೆ ದಿಲ್ಲಿಯ ಫ್ಲ್ಯಾಟ್‌ ನಲ್ಲಿ 8.59 ಕೋಟಿ ರೂ. ದೊರೆತ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಕಳೆದ ಶನಿವಾರ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಾಂಗ್ರೆಸ್ ನಾಯಕನನ್ನು ಶುಕ್ರವಾರ ನಾಲ್ಕು ಗಂಟೆಗೂ ಅಧಿಕ ಕಾಲ ಹಾಗೂ ಶನಿವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಡಿಕೆಶಿಯವರನ್ನು ಕಸ್ಟಡಿ ತೆಗೆದುಕೊಳ್ಳುವ ಅಗತ್ಯ ಇರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಮತ್ತು ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಲಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳೆದ ಎರಡು ಬಾರಿ ಡಿಕೆಶಿ ಅವರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಇದೇ ವೇಳೆ ಡಿಕೆಶಿ ಪ್ರಕರಣದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಶಿವಕುಮಾರ್ ಅವರು ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ಆಗಸ್ಟ್ 30ರಂದು ಮೊದಲ ಬಾರಿ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯದ ಎದುರು ಹಾಜರಾದ ಸಂದರ್ಭ ಡಿಕೆಶಿ ತನಿಖೆಯಲ್ಲಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು.

‘‘ನಾನು ಕಾನೂನನ್ನು ಗೌರವಿಸುತ್ತೇನೆ. ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ. ನಾವು ಶಾಸಕರು ಮತ್ತು ಕಾನೂನು ಪಾಲಕ ನಾಗರಿಕರು. ಜಾರಿ ನಿರ್ದೇಶನಾಲಯ ನನಗೆ ಸಮನ್ಸ್ ಜಾರಿ ಮಾಡಿದೆ. ಆದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಯಾಕೆ ನನಗೆ ಸಮನ್ಸ್ ನೀಡಿದ್ದಾರೆ ಎನ್ನುವುದು ತಿಳಿದಿಲ್ಲ’’ ಎಂದು ಡಿಕೆಶಿ ಈ ಹಿಂದೆ ತಿಳಿಸಿದ್ದರು.

 ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಮೇಲ್ಮನಿವಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಾಗುವುದು ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News