×
Ad

ಅಸ್ಸಾಂ ಎನ್‌ಆರ್‌ಸಿ: ಲಕ್ಷಕ್ಕೂ ಅಧಿಕ ಬುಡಕಟ್ಟು ಜನರು ಪಟ್ಟಿಯಿಂದ ಹೊರಕ್ಕೆ

Update: 2019-09-03 21:01 IST

ಗುವಾಹಟಿ,ಸೆ.3: ಶನಿವಾರ ಬಿಡುಗಡೆಯಾದ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ದೋಷಪೂರಿತವಾಗಿದೆ ಎಂದು ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಆರೋಪಿಸುತ್ತಿರುವ ಮಧ್ಯೆಯೇ, ಅಸ್ಸಾಂನ ನೈಜ ನಿವಾಸಿಗಳಾದ ಒಂದು ಲಕ್ಷಕ್ಕೂ ಅಧಿಕ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ರೈಟ್ಸ್ ಆ್ಯಂಡ್ ರಿಸ್ಕ್ಸ್ ಅಣಲಿಸಿಸ್ ಗ್ರೂಪ್ ತಿಳಿಸಿದೆ.

ಈ ಬಗ್ಗೆ ಸಂಸ್ಥೆ ಮಾಡಿರುವ ಪ್ರಾಥಮಿಕ ಸಮೀಕ್ಷೆಯಲ್ಲಿ 25,000 ಬೋಡೊಗಳು, 8,000 ಹಜೊಂಗ್‌ಗಳು, 12,000 ರಿಯಂಗ್‌ಗಳು ಮತ್ತು ಇತರ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಾವಿರಾರು ಮಂದಿಯನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೈಲಕಂಡಿ ಜಿಲ್ಲೆಯ ಸುಮಾರು 36,000 ರಿಯಂಗ್‌ಗಳ ಪೈಕಿ ಶೇ.25 ಮಂದಿಯನ್ನು ಹೊರಗಿಡಲಾಗಿದೆ. 1971ರಿಂದ ತಮ್ಮ ವಂಶಸ್ಥರ ಇರುವಿಕೆಯನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿರುವ ರಿಯಂಗ್ ಸಮುದಾಯದ ಬಹುತೇಕ ಮಹಿಳೆಯರನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹಕ್ಕುಗಳ ಸಂಸ್ಥೆಯ ನಿರ್ದೇಶಕ ಸುಹಾಸ್ ಚಕ್ಮ ತಿಳಿಸಿದ್ದಾರೆ. ರಿಯಂಗ್‌ಗಳು ಅಲೆಮಾರಿ ಕೃಷಿಕರಾಗಿದ್ದು, ಅತ್ಯಂತ ಕಡಿಮೆ ಸಾಕ್ಷರತಾ ದರವನ್ನು ಹೊಂದಿದ್ದಾರೆ ಮತ್ತು ಅತ್ಯಂತ ಸೂಕ್ಷ್ಮ ಬುಡಕಟ್ಟು ಗುಂಪುಗಳಲ್ಲಿ ಒಂದು ಎಂದು ಗುರುತಿಸಲ್ಪಡುತ್ತದೆ.

ಶಿಕ್ಷಣ ಮತ್ತು ಜಮೀನು ದಾಖಲೆ ಹೊಂದಿರದ ಕಾರಣ ಈ ಸಮುದಾಯದ ಮಹಿಳೆಯರಿಗೆ ತಮ್ಮದೇ ಸ್ವಂತ ಗುರುತು ಇಲ್ಲದಿರುವ ಕಾರಣ ತಮ್ಮ ಗುರುತುವಿಕೆಯನ್ನು ತಂದೆ ಅಥವಾ ಗಂಡನ ಮೂಲಕವೇ ಮಾಡಬೇಕಾಗುತ್ತದೆ.

ಈ ಮಹಿಳೆಯರಿಗೆ ಮದುವೆಯಾದ ಸಂದರ್ಭದಲ್ಲಿ ಅವರ ಹೆಸರನ್ನು ತವರಿನ ಪಡಿತರ ಚೀಟಿಯಿಂದ ತೆಗೆದುಹಾಕುವುದರಿಂದ ಅವರ ಕುಟುಂಬದ ಕೊಂಡಿ ಕಳಚಿಹೋಗುತ್ತದೆ. ಹೀಗಾಗಿ ಬಹುತೇಕ ರಿಯಂಗ್ ಮಹಿಳೆಯರ ಹೆಸರು ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ ಮಾಯವಾಗಿದೆ ಎಂದು ಚಕ್ಮ ತಿಳಿಸಿದ್ದಾರೆ. ಅಸ್ಸಾಂನ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲ ಸಮುದಾಯಗಳನ್ನು ರಾಜ್ಯದ ನಿಜವಾದ ನಿವಾಸಿಗಳು ಎಂದು ಎನ್‌ಆರ್‌ಸಿಯ ಅಂತಿಮ ಪಟ್ಟಿಗೆ ಸೇರಿಸುವಂತೆ ಅಸ್ಸಾಂ ಸರಕಾರಕ್ಕೆ ಹಕ್ಕುಗಳ ಸಂಸ್ಥೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News