ಸೆ.5ರಂದು ಸಾರ್ವತ್ರಿಕ ರೋಟಾ ವೆರಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ, ಸೆ.3: ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೆ.5ರಂದು ಚಾಲನೆ ನೀಡ ಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.
ಇಲಾಖಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಅವರು, ಜಾಗತಿಕವಾಗಿ 5 ವರ್ಷದೊಳಗಿನ ಶೇ.9ರಷ್ಟು ಮತ್ತು ಭಾರತದಲ್ಲಿ ಶೇ.10ರಷ್ಟು ಮಕ್ಕಳು ಅತಿಸಾರ ಬೇದಿಯಿಂದ ಸಾವನ್ನಪ್ಪುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ರೋಟಾ ವೈರಸ್‌ನಿಂದಾಗುವ ಅತಿಸಾರಬೇದಿಯ ಪ್ರಮಾಣ ಕಡಿಮೆ ಇದ್ದು, ಅದನ್ನು ಶೂನ್ಯ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮ ನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 14479 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಯನ್ನು ಹೊಂದಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, 59 ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸದಾಗಿ ನಿರ್ಮಿಸಲ್ಪಟ್ಟ 2 ಆರೋಗ್ಯ ಕೇಂದ್ರ, 2 ನಗರ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿಗಳಲ್ಲಿ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತೆಯರು ರೋಟಾವೈರಸ್ ಲಸಿಕೆಯನ್ನು ಬಾಯಿಯ ಮೂಲಕ 6, 10 ಮತ್ತು 14 ವಾರಗಳ ವಯಸ್ಸಿನ ಮಕ್ಕಳಿಗೆ ನೀಡಲಿದ್ದಾರೆ.
ಎಲ್ಲಾ ಲಸಿಕೆಗಳ ಜೊತೆಯಲ್ಲಿ ರೋಟಾವೈರಸ್ ಲಸಿಕೆಯನ್ನು ಈಗಾಗಲೇ ನೀಡಲಾಗುತ್ತಿದ್ದು, ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಆದರೆ ಕೆಲವೊಂದು ಬಾರಿ ಸಾಧಾರಣ ಪ್ರಮಾಣದ ಜ್ವರ, ಹೊಟ್ಟೆನೋವು ಅಥವಾ ವಾಂತಿಯ ಲಕ್ಷಣಗಳು ಕಂಡು ಬಂದರೂ ಅದರಿಂದ ಗಾಬರಿ ಪಡೇಕಾಗಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರದಿಂದ ಶನಿವಾರದ ವರೆಗೆ ಮತ್ತು ಎಲ್ಲಾ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಲ್ಲಿ ಪ್ರತೀ ಗುರುವಾರ ನಿಗದಿತ ದಿನದಂದು ನಿಯಮಿತ ಶಿಬಿರಗಳನ್ನು ನಡೆಸಿ ಉಚಿತ ವಾಗಿ ಈ ಲಸಿಕೆಯನ್ನು ನೀಡಲಾುತ್ತದೆ ಎಂದು ಅವರು ಹೇಳಿದರು.
ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೆ.5ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿರುವರು. ಉಡುಪಿ ಶಾಸಕ ಕೆ.ರಘುಪತಿ ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಎಂ.ಜಿ. ರಾಮ ಉಪಸ್ಥಿತರಿದ್ದರು.