×
Ad

ನಾಗರಿಕರ ಕೈ ಸೇರಲಿದೆ ಪೊಲೀಸ್ ಮಾಹಿತಿ: ಹೊಸ ಪ್ರಯತ್ನಕ್ಕೆ ಮುಂದಾದ ಮಂಗಳೂರು ನಗರ ಪೊಲೀಸರು

Update: 2019-09-03 22:31 IST

ಮಂಗಳೂರು, ಸೆ.3: ಇನ್ನು ಮುಂದೆ ಕಾನೂನು ಸುವ್ಯವಸ್ಥೆ ಸೇರಿದಂತೆ ಪೊಲೀಸ್ ಇಲಾಖೆಯಿಂದ ನೀಡಬೇಕಾದ ಅಗತ್ಯ ಸಂದೇಶಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ಗೆ ತಲುಪಲಿದೆ. ನಾಗರಿಕರನ್ನು ನೇರವಾಗಿ ತಲುಪುವ ಇಂತಹ ಹೊಸ ಪ್ರಯತ್ನಕ್ಕೆ ಮಂಗಳೂರು ನಗರ ಪೊಲೀಸರು ಕೈಹಾಕಿದ್ದು ಯಶಸ್ವಿಯಾಗಿದ್ದಾರೆ.

ಸೋಮವಾರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸಂದರ್ಭ ಈ ನೂತನ ಪ್ರಯೋಗಕ್ಕೆ ಕೈಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಬಿತ್ತುವ ಮಾಹಿತಿಯನ್ನು ರವಾನಿಸುವುದು ಕಾನೂನು ಪ್ರಕಾರ ತಪ್ಪು. ಇಂತಹ ನಡವಳಿಕೆ ತೋರಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಸಂದೇಶಗಳು ಕಂಡುಬಂದರೆ, ಪೊಲೀಸ್ ಕಂಟ್ರೋಲ್ ರೂಂ ವಾಟ್ಸ್‌ಆ್ಯಪ್ ಸಂಖ್ಯೆ- 9480802300 ಮಾಹಿತಿ ತಿಳಿಸುವಂತೆ ಅಧಿಕೃವಾಗಿ ವಾಯ್ಸೆ ಮೆಸೇಜ್‌ಗಳನ್ನು ಹರಿಯ ಬಿಡಲಾಗಿದೆ. ಈ ಸಂದೇಶಗಳು ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ನಾಗರಿಕರ ಮೊಬೈಲ್‌ಗೆ ತಲುಪಿದೆ.

ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರ ಕಲ್ಪನೆಯಲ್ಲಿ ಮೂಡಿಬಂದ ‘ನನ್ನ ಬೀಟ್-ನನ್ನ ಹೆಮ್ಮೆ’ ಯೋಜನೆಯಲ್ಲಿ ಪ್ರತಿ ಬೀಟ್ ವ್ಯಾಪ್ತಿಯಲ್ಲಿರುವ ನಾಗರಿಕರ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಅಂತಹ ಎಲ್ಲ ಗುಂಪುಗಳಿಗೆ ಏಕಕಾಲಕ್ಕೆ ಪೊಲೀಸ್ ಕಂಟ್ರೋಲ್ ರೂಂನಿಂದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಸಂದೇಶಗಳು ಏಕಕಾಲಕ್ಕೆ ಪ್ರತಿಯೊಬ್ಬ ನಾಗರಿಕರಿಗೂ ಸುಲಭದಲ್ಲಿ ತಲುಪುತ್ತದೆ.

‘ಗಾಳಿಸುದ್ದಿ, ಕಾನೂನು ಸುವ್ಯವಸ್ಥೆ ಮಾಹಿತಿ, ವಿಐಪಿಗಳು ಬಂದಾಗ ಜನತೆಗೆ ಮುಂಚಿತವಾಗಿ ಮಾಹಿತಿ, ತುರ್ತು ಅಡಚಣೆಗಳ ಸಂದರ್ಭ ಟ್ರಾಫಿಕ್ ಮಾಹಿತಿ ಇತ್ಯಾದಿ ಅಗತ್ಯ ಸಂದೇಶಗಳನ್ನು ಈ ಮೂಲಕ ನೀಡಲಾಗುತ್ತದೆ. ನಾಗರಿಕರ ಜಾಗೃತಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News