×
Ad

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಮಾರಣಹೋಮ !

Update: 2019-09-04 18:17 IST

ಉಡುಪಿ, ಸೆ.4: ರಾಷ್ಟ್ರೀಯ ಹೆದ್ದಾರಿ ಪರ್ಕಳ ದೇವಿನಗರದಿಂದ ಆದಿಉಡುಪಿ ಕರಾವಳಿ ಜಂಕ್ಷನ್‌ವರೆಗಿನ 10ಕಿ.ಮೀ. ವ್ಯಾಪ್ತಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಕಡಿಯಲು ಉದ್ದೇಶಿಸಿರುವ 140 ಮರಗಳ ಪೈಕಿ ಈಗಾಗಲೇ ಕೆಲವು ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಅಕ್ರಮ ವಾಗಿ ಕಡಿದಿರುವ ವಿಚಾರ ಬಹಿರಂಗಗೊಂಡಿದೆ.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆಯಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕ್ರಮಕೈಗೊಳ್ಳಬೇಕಾ ಗಿರುವುದರಿಂದ ಇಂದು ಉಡುಪಿ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಕರೆಯಲಾದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಪರಿಸರಾಸ್ತಕರು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಸರ ಪ್ರೇಮಿ ಬಾಲಕೃಷ್ಣ ಮದ್ದೋಡಿ ಅಹವಾಲು ಸಲ್ಲಿಸಿ, ಈ ಸಭೆ ಕರೆಯುವ ಮೊದಲೇ ಮಣಿಪಾಲ ಕಸ್ತೂರ್ಬಾ ಕ್ಯಾನ್ಸರ್ ಆಸ್ಪತ್ರೆ, ಶಾಂತಲಾ ಹೊಟೇಲ್ ಹೀಗೆ ಹಲವು ಕಡೆಗಳಲ್ಲಿ ಹತ್ತಾರು ಬೃಹತ್ ಮರಗಳನ್ನು ಕಡಿದು ಸಾಗಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಲೋಹಿತ್ ಜಿ., ಅರಣ್ಯ ಇಲಾಖೆಯಿಂದ ಯಾವುದೇ ಮರಗಳನ್ನು ಕಡಿಯಲು ಈವರೆಗೆ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಮರ ಕಡಿದಿರುವುದರಿಂದ ಇದು ಅಕ್ರಮವಾಗುತ್ತದೆ ಎಂದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪರಿಸರವಾದಿಗಳು, ರಾಷ್ಟ್ರೀಯ ಹೆದ್ದಾರಿ ಯವರು ಎಷ್ಟು ಮರಗಳನ್ನು ಹೀಗೆ ಅಕ್ರಮವಾಗಿ ಕಡಿದಿದ್ದಾರೆ ಮತ್ತು ಆ ಮರಗಳನ್ನು ಎಲ್ಲಿಗೆ ಸಾಗಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಈ ಕುರಿತು ಇಲಾಖಾಧಿಕಾರಿ ಗಳಿಗೆ ನೋಟೀಸ್ ನೀಡಿ, ತಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಜಂಟಿ ಸರ್ವೆಗೆ ಆಗ್ರಹ: ಚತುಷ್ಪಥ ಕಾಮಗಾರಿಗಾಗಿ ಕಡಿಯಲು ಉದ್ದೇಶಿಸಿರುವ 140 ಮರಗಳ ಕುರಿತು ಸಾರ್ವಜನಿಕರ ಹಾಗೂ ಇಲಾಖೆಯ ಜಂಟಿ ತಂಡ ರಚಿಸಿ ಸರ್ವೆ ನಡೆಸಬೇಕು. ಇದರಲ್ಲಿ ಗರಿಷ್ಠ ಮರಗಳನ್ನು ಉಳಿಸಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಮರಗಳನ್ನು ಬೇರೆ ಕಡೆ ಸ್ಥಳಾಂತರಿ ಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರೇಮಾನಂದ ಕಲ್ಮಾಡಿ ಸಲಹೆ ನೀಡಿದರು.

ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ, ಬಾಲಕೃಷ್ಣ ಮದ್ದೋಡಿ, ಸ್ವಚ್ಛ ಭಾರತ್ ಬ್ರಿಗೇಡ್‌ನ ಸುಧಾಕರ್, ರತ್ನಾಕರ ಇಂದ್ರಾಳಿ, ಬಾಲಕೃಷ್ಣ ಪರ್ಕಳ ಅಹವಾಲುಗಳನ್ನು ಸಲ್ಲಿಸಿ, ಸಾಧ್ಯವಾಗುವಷ್ಟು ಮರಗಳನ್ನು ಬೇರೆ ಕಡೆ ಸ್ಥಳಾಂತ ರಿಸಿ ಮರುಜೀವ ನೀಡಬೇಕು ಎಂದು ಒತ್ತಾಯಿಸಿ ದರು. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿದ ಪರಿಣಾಮ ಕರಾವಳಿ ಈಗ ಉಷ್ಣತೆಯ ಕಾರಿಡಾರ್ ಆಗಿ ಪರಿವರ್ತನೆಯಾಗುತ್ತಿದೆ ಎಂದರು.

ಸಾರ್ವಜನಿಕ ಹಾಗೂ ಇಲಾಖೆಯ ಜಂಟಿ ಸಮಿತಿಯನ್ನು ರಚಿಸಿ ಕಡಿ ಯಲು ಉದ್ದೇಶಿಸಿರುವ ಮರಗಳನ್ನು ಸರ್ವೆ ನಡೆಸಲಾಗುವುದು. ಸ್ಥಳಾಂತರ ಮಾಡಿದರೆ ಯಾವ ಮರಗಳು ಬದುಕಿ ಉಳಿಯಬಹುದು ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ತಿಳಿಸಿದರು.

ಸಭೆಯಲ್ಲಿ ಪ್ರಭಾರ ಉಡುಪಿ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

ವಲಸೆ ಹಕ್ಕಿಗಳ ಮರಗಳಿಗೂ ಕೊಡಲಿ!

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಪರಿಣಾಮ ಪ್ರತಿವರ್ಷ ಹೊರ ದೇಶಗಳಿಂದ ಮಣಿಪಾಲಕ್ಕೆ ವಲಸೆ ಬರುತ್ತಿದ್ದ ಹಕ್ಕಿಗಳಿಗೂ ಅಪಾಯ ಎದುರಾಗಿದೆ.

ಹಲವು ವರ್ಷಗಳಿಂದ ವಲಸೆ ಬರುವ ವಿವಿಧ ಪ್ರಬೇಧದ ಪಕ್ಷಿಗಳು ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಮರಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಆದರೆ ಇದೀಗ ಈ ಮರಗಳು ಕೂಡ ಕಡಿಯುವ ಪಟ್ಟಿಯಲ್ಲಿರುವುದರಿಂದ ವಲಸೆ ಪಕ್ಷಿಗಳಿಗೆ ಆವಾಸವೇ ಇಲ್ಲವಾಗಿದೆ. ಅದೇ ರೀತಿ ಮಣಿಪಾಲದ ಕೆಎಂಸಿ ತುರ್ತು ಚಿಕಿತ್ಸಾ ಘಟಕದ ಎದುರು ನೂರಾರು ಸಂಖ್ಯೆ ಬಾವಲಿಗಳಿಗೆ ಆಶ್ರಯವಾಗಿದ್ದ ಮರ ಕೂಡ ಹೆದ್ದಾರಿ ಕಾಮಗಾರಿಗೆ ಬಲಿಯಾಗಲಿದೆ. ಆದುದರಿಂದ ಈ ಮರಗಳನ್ನು ರಕ್ಷಿಸಬೇಕು ಎಂದು ರತ್ನಾಕರ ಇಂದ್ರಾಳಿ ಸಭೆಯಲ್ಲಿ ಒತ್ತಾಯಿಸಿದರು.

ವೃಕ್ಷ ಪ್ರಾಧಿಕಾರದಲ್ಲಿ ಚರ್ಚಿಸಿ ಕ್ರಮ

ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣಗಳಿಗೆ ಮರಗಳನ್ನು ಕಡಿಯುವ ಬಗ್ಗೆ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದರೆ, ಇಲಾಖೆಯಿಂದ ಬೇಡಿಕೆಯ ನೋಟೀಸ್ ಸಲ್ಲಿಸಲಾಗುವುದು. ಅದರಂತೆ ಒಂದು ಮರಗಳನ್ನು ಕಡಿದರೆ 10 ಮರಗಳನ್ನು ನೆಡಲು ಹಾಗೂ ಪೋಷಿಸಲು ಬೇಕಾದ ಖರ್ಚನ್ನು ಆ ಇಲಾಖೆಯವರು ನೀಡ ಬೇಕು. ನಂತರ ಸಾರ್ವಜನಿಕರ ಅಹವಾಲು ಸಭೆ ಕರೆದು, ಏಲಂ ಮೂಲಕ ಮರ ಕಡಿಯಲು ಗುತ್ತಿಗೆ ನೀಡಲಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ತಿಳಿಸಿದರು.

ಸಭೆಯಲ್ಲಿ ಸ್ವೀಕರಿಸಿದ ಸಾರ್ವಜನಿಕ ಅಹವಾಲುಗಳನ್ನು ನಾಲ್ವರು ಸದಸ್ಯ ರನ್ನೊಳಗೊಂಡ ವೃಕ್ಷ ಪ್ರಾಧಿಕಾರದ ಮುಂದೆ ಇಡಲಾಗುವುದು. ಮುಂದೆ ಅಲ್ಲಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಉಡುಪಿ ಜಿಲ್ಲೆಯಲ್ಲಿ ಶೇ.40 ರಷ್ಟು ಅರಣ್ಯ ಪ್ರದೇಶಗಳಿದ್ದು, ಕಳೆದ 10ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಮರಗಳನ್ನು ಬಲಿ ತೆಗೆದುಕೊಳ್ಳಲಾಗಿದೆ. ಇದೇ ರೀತಿ ಮುಂದುವರೆದರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಂಭವಿಸಿದಂತಹ ಭೂಕುಸಿತ ಇಲ್ಲೂ ಕೂಡ ಸಂಭವಿಸುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News