ಇರ್ವತ್ತೂರು: ದಂಪತಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ

Update: 2019-09-04 14:18 GMT

ಕಾರ್ಕಳ, ಸೆ. 4: ನಾಲ್ವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ದಂಪತಿಯನ್ನು ಕಟ್ಟಿ ಹಾಕಿ ಪಿಸ್ತೂಲ್ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿರುವ ಘಟನೆ ಇರ್ವತ್ತೂರು ಸಮೀಪದ ಕೊಳಕೆ ಎಂಬಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ.

ಕೊಳಕೆಯ ಹರೀಶ್ ಭಟ್ (50) ತನ್ನ ಪತ್ನಿ ಶ್ರೀಲಕ್ಷ್ಮೀ ಜೊತೆ ಮನೆಯಲ್ಲಿ ಟಿವಿ ನೋಡುತ್ತಿರುವಾಗ ಹೊರಗಿನಿಂದ ಯಾರೋ ಭಟ್ರೆ ಎಂದು ಕರೆದರೆನ್ನಲಾಗಿದೆ. ಈ ವೇಳೆ ಹರೀಶ್ ಭಟ್ ಅಡುಗೆ ಮನೆಯ ಬಾಗಿಲು ತೆಗೆದಾಗ ಹೊರಗೆ ನಿಂತಿದ್ದ ಓರ್ವ ಕೂಡಲೇ ಮನೆಯ ಒಳಗೆ ನುಗ್ಗಿ, ಹರೀಶ್ ಭಟ್ ಅವರ ಕುತ್ತಿಗೆ ಒತ್ತಿ ಹಿಡಿದು ಬೊಬ್ಬೆ ಹಾಕಿದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದು, ನಂತರ ಹೊರಗಿನಿಂದ ಇನ್ನೂ ಮೂವರು ವ್ಯಕ್ತಿಗಳು ಒಳಗೆ ಪ್ರವೇಶಿಸಿ ದಂಪತಿಯನ್ನು ಪ್ಲಾಸ್ಟಿಕ್ ಟ್ಯಾಗ್‌ನಿಂದ ಕೈಕಾಲು ಕಟ್ಟಿದರು. ಅದರಲ್ಲಿ ಓರ್ವ ತನ್ನಲ್ಲಿದ್ದ ಪಿಸ್ತೂಲನ್ನು ಹರೀಶ್ ಭಟ್ ಅವರ ಮುಖಕ್ಕೆ ಗುರಿ ಇಟ್ಟು ಬೊಬ್ಬೆ ಹಾಕಿದರೆ ಶೂಟ್ ಮಾಡಿ ಸಾಯಿಸುವುದಾಗಿ ಹೆದರಿಸಿದ ಎಂದು ದೂರಲಾಗಿದೆ.

ಬಳಿಕ ದಂಪತಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆ ತುರುಕಿಸಿದ ದುಷ್ಕರ್ಮಿಗಳು, ಮನೆಯ ಒಳಗಡೆ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ತುಳಸಿ ಮಣಿ ಸರ, ಚಿನ್ನದ ಮೂರು ಉಂಗುರ, ಚಿನ್ನದ ಪೆಂಡೆಂಟ್, ಚಿನ್ನದ ಕಿವಿಯ ಬೆಂಡೋಲೆ ಒಂದು ಜೊತೆ ಹಾಗೂ ನಗದು 3000 ರೂ. ಸುಲಿಗೆ ಮಾಡಿದ್ದಾರೆ ಎಂದು ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 1.26 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್, ಕಾರ್ಕಳ ಗ್ರಾಮಾತರ ಎಸ್ಸೈ ನಾಸೀರ್ ಹುಸೈನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News