ದ.ಕ. ಜಿಲ್ಲೆಯಲ್ಲಿ 11 ಬಸ್‌ಗಳಿಗೆ ಕಲ್ಲೆಸೆತ
ಮಂಗಳೂರು, ಸೆ.4: ಉದ್ರಿಕ್ತ ಗುಂಪುಗಳಿಂದ ದ.ಕ. ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಬೆಳಗ್ಗೆ ಬಸ್‌ಗಳಿಗೆ ಕಲ್ಲು ತೂರಿದ ಘಟನೆಗಳು ವರದಿಯಾಗಿದ್ದು, 11 ಬಸ್‌ಗಳು ಜಖಂಗೊಂಡಿವೆ.
ಜಿಲ್ಲೆಯಲ್ಲಿ ಎಂಟು ಖಾಸಗಿ ಹಾಗೂ ಮೂರು ಸರಕಾರಿ ಬಸ್‌ಗಳಿಗೆ ಕಲ್ಲು ತೂರಿದ ಘಟನೆ ನಡೆದಿವೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನು, ಕಲ್ಲು ತೂರಿದ ಘಟನೆಗಳು ಸಂಭವಿಸಿದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ತಾಂತ್ರಿಕ ಆಯಾಮದಲ್ಲೂ ತನಿಖೆಯನ್ನು ಕೈಗೊಂಡಿದ್ದಾರೆ.
ಜಿಲ್ಲೆಯ ಕಿನ್ನಿಗೋಳಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಐದು ಬಸ್‌ಗಳಿಗೆ ಮಂಗಳವಾರ ತಡರಾತ್ರಿ ಕಲ್ಲೆಸೆತ ಸಂಭವಿಸಿದ್ದು, ಬಸ್‌ಗಳ ಗಾಜು ಪುಡಿಗಟ್ಟಿವೆ. ಬುಧವಾರ ಬೆಳಗ್ಗೆ ಮಂಗಳೂರು ನಗರದ ಫಳ್ನೀರ್, ನಂದಿಗುಡ್ಡೆಯಲ್ಲಿನ ಖಾಸಗಿ ಬಸ್‌ಗಳಿಗೆ ಕಲ್ಲೆಸೆಯಲಾಗಿದೆ. ಇನ್ನು ಮಂಗಳೂರು ಬಿಜೈನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಬಲ್ಮಠದಲ್ಲಿ ತಲಾ ಒಂದೊಂದು ಸರಕಾರಿ ಬಸ್‌ಗಳಿಗೆ ಕಲ್ಲೆಸೆತ ದುಷ್ಕೃತ್ಯ ನಡೆದಿವೆ.
ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.