ಡಿಕೆಶಿ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ: ವಿನಯ ಕುಮಾರ್ ಸೊರಕೆ
ಉಡುಪಿ, ಸೆ.4: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದ ಜೋಡು ಕಟ್ಟೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪಿತೂರಿ ಯಿಂದಲೇ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಕೇಂದ್ರ ಸರಕಾರ ಡಿಕೆಶಿ ವಿರುದ್ಧ ಹಗೆತನ ಸಾಧಿಸುತ್ತ್ತ ನಿರಂತರ ಕಿರುಕುಳ ನೀಡುತ್ತಿದೆ. ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡಿದರೂ ಶಿವಕುಮಾರ್‌ರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.
ಬಿಜೆಪಿ ಸಿಬಿಐ, ಇಡಿ, ಐಟಿ ಹಾಗೂ ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹೆಣೆಯುವ ಕಾರ್ಯಕ್ಕೆ ಕೈಹಾಕಿದೆ. ಬೇರೆ ಬೇರೆ ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಅಸ್ಥಿತ್ವವನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಅವರು ದೂರಿದರು.
ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸಲು ಮೀಸಲಿರಿಸಿರುವ 1.72 ಲಕ್ಷ ಕೋಟಿ ತುರ್ತು ನಿಧಿ ಯನ್ನು ಕೇಂದ್ರ ಸರಕಾರ ಆರ್‌ಬಿಐಯಿಂದ ಪಡೆದುಕೊಂಡಿದೆ. ಬ್ಯಾಂಕ್ ವಿಲೀನ ಪ್ರಕ್ರಿಯೆ ಮೂಲಕ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿರ ಪರಿಸ್ಥಿತಿಗೆ ತರುವ ಭ್ರಮೆಯಲ್ಲಿ ಕೇಂದ್ರ ಸರಕಾರ ಇದೆ ಎಂದರು.
ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ, ಇಡಿ, ಐಟಿ ಅಧಿಕಾರಿ ಗಳು ಕೇಂದ್ರ ಸರಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ತಮ್ಮ ಪಕ್ಷದ ನಾಯಕರ ಮೇಲಿನ ಪ್ರಕರಣವನ್ನು ಕೈಬಿಟ್ಟು, ವಿರೋಧ ಪಕ್ಷದ ನಾಯಕರ ಮೇಲೆ ಧ್ವೇಷ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮಿತಿಮೀರಿದ್ದು, ವಾಮಮಾರ್ಗದ ಮೂಲಕ ಕಾಂಗ್ರೆಸ್ ನಾಯಕರನ್ನು ಮಟ್ಟಹಾಕಲು ಮುಂದಾಗಿದೆ. ಬಿಜೆಪಿಯ ಕೆಳಮಟ್ಟದ ರಾಜ ಕಾರಣಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡ ವೂರು, ಮುಖಂಡರಾದ ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಯತೀಶ್ ಕರ್ಕೇರ, ಡಾ.ಸುನೀತಾ ಶೆಟ್ಟಿ, ಶಿವಾಜಿ ಸುವರ್ಣ, ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೊ, ರೋಶನಿ ಒಲಿವೆರಾ, ಪ್ರಶಾಂತ್ ಜತ್ತನ್ನ, ನಾರಾಯಣ ಕುಂದರ್, ಮೀನಾಕ್ಷಿ ಬನ್ನಂಜೆ, ದಿವಾಕರ ಕುಂದರ್, ಇಸ್ಮಾಯಿಲ್ ಆತ್ರಾಡಿ, ಭಾಸ್ಕರ್ ರಾವ್ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.