×
Ad

ರಾಯಚೂರಿನ ರೈತ ಮಹಿಳೆಗೆ ‘ಕಾರಂತ ಹುಟ್ಟೂರ ಪ್ರಶಸ್ತಿ’

Update: 2019-09-04 20:30 IST

ಉಡುಪಿ, ಸೆ.4: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ನೀಡುವ 2019ನೆ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೃಷಿ ಸಾಧಕಿ ಕವಿತಾ ಮಿಶ್ರಾ ಆಯ್ಕೆಯಾಗಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಈ ವಿಷಯ ಪ್ರಕಟಿಸಿದರು. ಕಳೆದ 14 ವರ್ಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅ.10ರಂದು ಕೋಟದ ಕಾರಂತರ ಥೀಮ್ ಪಾರ್ಕ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಅ.10ರಿಂದ 19ರ ವರೆಗೆ ಹತ್ತು ದಿನಗಳ ಕಾಲ ಸಾಂಸ್ಕೃತಿಕ, ಸಾಹಿತ್ಯಿಕ ಸುಗ್ಗಿ ‘ಪುನರ್ವಸು-2019’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹತ್ತು ದಿನಗಳಲ್ಲಿ ಕಾರಂತ ವಿರಾಸತ್, ಪ್ರತಿಭಾ ನಮನ, ಮಕ್ಕಳ ಹಬ್ಬ, ಚಲನಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ, ಜಾದು ಜಾತ್ರೆ, ಆನ್‌ಲೈನ್ ಕ್ವಿಜ್ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಗ್ರಾಪಂ ಪಿಡಿಒ ಶೈಲಾ ಎಸ್.ಪೂಜಾರಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News