ಉಡುಪಿ: ಸೆ.7ರಿಂದ ರಾಜ್ಯಮಟ್ಟದ ರೇಂಜರ್ಸ್ ಶತಮಾನೋತ್ಸವ ಉದ್ಘಾಟನೆ
ಉಡುಪಿ, ಸೆ.4: ರಾಜ್ಯಮಟ್ಟದ ರೇಂಜರ್ಸ್ ಶತಮಾನೋತ್ಸವ ಉದ್ಘಾಟನೆ, ರೋವರ್ಸ್ ರೇಂಜರ್ ಮೂಟ್, ರೋವರ್ ಸ್ಕೌಟ್ಸ್ ಲೀಡರ್ಸ್- ರೇಂಜರ್ ಲೀಡರ್ಸ್ ಸಮಾವೇಶವನ್ನು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಸೆ.7ರಿಂದ 10ರವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಸೆ.7ರಂದು ಅಪರಾಹ್ನ ಮೂರು ಗಂಟೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿರುವರು. ಜಿಲ್ಲಾಧಿಕಾರಿ ಟಿ.ಜಗದೀಶ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಭಾಗವಹಿಸಲಿರುವರು ಎಂದು ಸಂಘಟಕ ಡಾ.ಜಯ ರಾಮ ಶೆಟ್ಟಿಗಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
9ರಂದು ಬೆಳಗ್ಗೆ 8:30ಕ್ಕೆ ನಡೆಯುವ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಹಾಗೂ 10:30ಕ್ಕೆ ನಡೆಯುವ ಬೀಚ್ ಕ್ರೀಡಾಕೂಟಕ್ಕೆ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಚಾಲನೆ ನೀಡಲಿರುವರು.
10ರಂದು ಅಪರಾಹ್ನ 3:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಆಂದ ಸಿ.ಕುಂದರ್ ವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸ್ಕೌಟ್ ಜಿಲ್ಲಾ ಆಯುಕ್ತ ಡಾ.ವಿಜಯೀಂದ್ರ ವಸಂತ ರಾವ್, ಮಿಲಾಗ್ರಿಸ್ ಕಾಲೇಜಿನ ಡೀನ್ ಪ್ರೊ.ಮೆಲ್ವಿನ್ ರೇಗೋ ಉಪಸ್ಥಿತರಿದ್ದರು.