×
Ad

ಅಮಿತ್ ಶಾ, ಮೋದಿಯಿಂದ ದ್ವೇಷ ರಾಜಕಾರಣ: ರಮಾನಾಥ ರೈ

Update: 2019-09-04 21:24 IST

ಮಂಗಳೂರು, ಸೆ.4: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಂದ ದೇಶದಲ್ಲಿ ದ್ವೇಷದ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಜಾರಿ ನಿರ್ದೇಶನಾಲಯದ ದುರ್ಬಳಕೆ ಮತ್ತು ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಮುಖಂಡರ ಬಂಧನವನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಕೇಂದ್ರ ಸರಕಾರದ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಮುಖಂಡರ ಬಂಧನ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ವಿಧಾನಸಭೆಯಲ್ಲಿ ಸದಸ್ಯರು ಪಕ್ಷಾಂತರಕ್ಕೆ ಹಣದ ಆಮಿಷ ಒಡ್ಡಲಾಗಿದೆ ಎಂದು ಮಾಡಿರುವ ಆರೋಪದ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ ಎಂದು ರಮಾನಾಥ ರೈ ಪ್ರಶ್ನಿಸಿದರು.  ಬಳಿಕ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಮೋದಿ, ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆದ ಸಂದರ್ಭದಲ್ಲಿ ಪೋಲಿಸರು ಹಲವರನ್ನು ವಶಕ್ಕೆ ತೆಗೆದುಕೊಂಡರು.

ಪ್ರತಿಭಟನಾ ಸಭೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಶಾಲೆಟ್ ಪಿಂಟೊ, ಮಮತಾ ಗಟ್ಟಿ, ಪಿ.ವಿ.ಮೋಹನ್, ಟಿ.ಕೆ. ಸುಧೀರ್, ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News