ರಾಷ್ಟ್ರೀಯ ಕರಡು ಶಿಕ್ಷಣ ನೀತಿ ’ಭಾರತ ಕೇಂದ್ರಿತ’: ಶ್ವೇತಾ ರಾವ್
ಉಡುಪಿ, ಸೆ.4: ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ’ಭಾರತ ಕೇಂದ್ರಿತ’ ವಾಗಿದ್ದು, ಉನ್ನತ ಶಿಕ್ಷಣಕ್ಕೆ ಈಗಿರುವ ಶೇ.20 ವಿದ್ಯಾರ್ಥಿ ಪ್ರವೇಶವನ್ನು 2030ರ ಸುಮಾರಿಗೆ ಶೇ. 50ಕ್ಕೇರಿಸುವ ಗುರಿಯನ್ನು ಹೊಂದಿದೆ ಎಂದು ಹೊಸದಿಲ್ಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉಪನಿರ್ದೇಶಕಿ ಶ್ವೇತಾ ರಾವ್ ಹೇಳಿದ್ದಾರೆ.
ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಇದರ ಜಂಟಿ ಸಹಯೋಗದಲ್ಲಿ ಕಾಲೇಜಿನ ಎವಿ ಹಾಲ್‌ನಲ್ಲಿ ಬುಧವಾರ 'ನವ ಶಿಕ್ಷಣ ನೀತಿ- ಸ್ಪರ್ಧಾತ್ಮಕ ಪರೀಕ್ಷೆ' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.
ಜಗತ್ತಿನಲ್ಲಿ ಭಾರತ ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು ವಿದ್ಯಾರ್ಥಿ, ಯುವಜನ ಸಂಪನ್ಮೂಲದ ಸದ್ಭಳಕೆ, ಕೌಶಲ್ಯಾವೃದ್ಧಿ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಸಮಾನತೆ, ಗುಣಮಟ್ಟ ಸಹಿತ ಉತ್ತರಾಯಿತ್ವ ನೂತನ ಶಿಕ್ಷಣ ನೀತಿಯಲ್ಲಿದ್ದು, ಇದರಲ್ಲಿ ಜಾಗತಿಕ ಮಟ್ಟದ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಕರಡು ಶಿಕ್ಷಣ ನೀತಿಯಲ್ಲಿ ಬಹು ಆಯಾಮದ ಕಲಿಕೆಗೆ ಅವಕಾಶವಿದೆ. ರಾಜಕೀಯ ಇಚ್ಛಾ ಶಕ್ತಿ ಕಂಡುಬಂದರೆ ನೂತನ ನೀತಿ ವ್ಯವಸ್ಥಿತವಾಗಿ ಜಾರಿಗೊಂಡು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯವಾಗಲಿದೆ. ಕಳೆದ 70 ವರ್ಷಗಳಲ್ಲಿ ಉತ್ತಮ ದೂರದೃಷ್ಟಿಯ ಯೋಜನೆಗಳಿದ್ದರೂ, ಅವುಗಳ ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ ಎಂದವರು ನುಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಕ್ಕೆ 10ರಿಂದ 12ಗಂಟೆ ತಪಸ್ಸಿನಂತೆ ಓದಬೇಕು, ವಿಷಯಾಸಕ್ತಿ ಬೇಕು. ಭದ್ರತೆ ಕಾರಣಕ್ಕೆ ಸರಕಾರಿ ಉದ್ಯೋಗ ಹಾಟ್ ಕೇಕ್ ನಂತಾಗಿದೆ. ಪ್ರತಿಭೆ, ಕೌಶಲ್ಯವುಳ್ಳವರಿಗೆ ಜಗತ್ತಿನ ಎಲ್ಲಾದರೂ ಅವಕಾಶ ಸಿಕ್ಕೇ ಸಿಗುತ್ತದೆ. ಆದುದರಿಂದ ಸರಕಾರಿ ಹುದ್ದೆ ಕೊನೆಯ ಆಯ್ಕೆಯಾಗಬೇಕು ಎಂದು ಹೇಳಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿದೇವಿ, ಐಕ್ಯುಎಸಿ ಸಮನ್ವಯಕಾರ ಪ್ರೊ.ಅರುಣ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ರಾಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಸ್ವಾಗತಿಸಿದರು. ಮೈತ್ರೇಯಿ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ್ ವಂದಿಸಿದರು.