×
Ad

ಬೇರೆ ಕಾನೂನು ಕಾಲೇಜಿಗೆ ಸಂತ್ರಸ್ತ ವಿದ್ಯಾರ್ಥಿನಿ, ಸೋದರನ ವರ್ಗಾವಣೆಗೆ ಸುಪ್ರೀಂ ಆದೇಶ

Update: 2019-09-04 22:18 IST

ಹೊಸದಿಲ್ಲಿ,ಸೆ.4: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಕಿರುಕುಳದ ಆರೋಪಗಳನ್ನು ಮಾಡಿರುವ ಶಹಜಾನ್‌ಪುರದ ಎಲ್‌ಎಲ್‌ಎಂ ವಿದ್ಯಾರ್ಥಿನಿ ಮತ್ತು ಆಕೆಯ ಸೋದರನನ್ನು ಬರೇಲಿ ವಿವಿಗೆ ಸಂಯೋಜಿತಗೊಂಡಿರುವ ಬೇರೆ ಕಾನೂನು ಕಾಲೇಜಿಗೆ ವರ್ಗಾವಣೆಗೊಳಿಸುವಂತೆ ಬುಧವಾರ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು,ತನಗೆ ಅವರ ಭವಿಷ್ಯ ಮುಖ್ಯವಾಗಿದೆ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶದಂತೆ ವಿದ್ಯಾರ್ಥಿನಿ ಮತ್ತು ಆಕೆಯ ಸೋದರನಿಗೆ ಹಾಸ್ಟೆಲ್ ಸೌಲಭ್ಯವಿರುವ ಬೇರೆ ಕಾಲೇಜಿಗೆ ವರ್ಗಾವಣೆಗೊಳಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರಕಾರವು ನ್ಯಾಯಮೂರ್ತಿಗಳಾದ ಆರ್.ಭಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರ ಪೀಠಕ್ಕೆ ತಿಳಿಸಿತು.

ವಿದ್ಯಾರ್ಥಿನಿ ಮತ್ತು ಆಕೆಯ ಸೋದರ ಅನುಕ್ರಮವಾಗಿ ಎಲ್‌ಎಲ್‌ಎಂ ಮತ್ತು ಎಲ್‌ಎಲ್‌ಬಿ ತರಗತಿಗಳಿಗೆ ಸೇರಲಿರುವ ಕಾಲೇಜುಗಳಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಪೀಠವು ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಕೋರಿಕೊಂಡಿತು. ಕಳೆದ ವಾರ ತಾನು ಕೈಗೆತ್ತಿಕೊಂಡಿದ್ದ ಸ್ವಯಂ ಪ್ರೇರಿತ ಅರ್ಜಿಯನ್ನು ವಿಲೇವಾರಿಗೊಳಿಸಿದ ಪೀಠವು, ಯುವತಿ ಮತ್ತು ಆಕೆಯ ಪೋಷಕರು ದಿಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಶಹಜಾನ್‌ಪುರದ ತಮ್ಮ ನಿವಾಸಕ್ಕೆ ಮರಳಲು ಸ್ವತಂತ್ರರಿದ್ದಾರೆ ಎಂದು ತಿಳಿಸಿತು.

ಅಗತ್ಯ ಭದ್ರತೆ ಸೇರಿದಂತೆ ಮುಂದಿನ ಯಾವುದೇ ನಿರ್ದೇಶಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಸೂಚಿಸಿತು.

  ಶಹಜಾನ್‌ಪುರದಲ್ಲಿ ಚಿನ್ಮಯಾನಂದರ ಆಶ್ರಮವು ನಡೆಸುತ್ತಿರುವ ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರಿಸಲು ತಾನು ಬಯಸುತ್ತಿಲ್ಲ ಎಂದು ವಿದ್ಯಾರ್ಥಿನಿ ಈ ಮೊದಲು ಚೇಂಬರ್‌ನಲ್ಲಿ ನ್ಯಾಯಾಧೀಶರೊಂದಿಗಿನ ಸಂವಾದದ ವೇಳೆ ತಿಳಿಸಿರುವುದಾಗಿ ಸುಪ್ರೀಂ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News