ಸಂಜೀವ್ ಭಟ್ ಮನವಿ ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶ !

Update: 2019-09-04 17:02 GMT

ಅಹ್ಮದಾಬಾದ್, ಸೆ. 4: ಕಸ್ಟಡಿ ಸಾವಿಗೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಜಾಮೀನು ಅರ್ಜಿಯ ವಿಚಾರಣೆಯಿಂದ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮಂಗಳವಾರ ಹಿಂದೆ ಸರಿದಿದ್ದಾರೆ.

ಭಟ್ ಹಾಗೂ ಪ್ರವೀಣ್ ಸಿನ್ಹಾ ಝಾಲಾ ಅವರ ಜಾಮೀನು ಮನವಿ ನನ್ನ ಮುಂದೆ ಇಲ್ಲ ಎಂದು ನ್ಯಾಯಮೂರ್ತಿ ಹರ್ಷ ದೇವಾನಿ ಅವರೊಂದಿಗೆ ವಿಭಾಗೀಯ ಪೀಠದಲ್ಲಿ ಇದ್ದ ನ್ಯಾಯಮೂರ್ತಿ ವಿ.ಬಿ. ಮಾಯಾನಿ ತಿಳಿಸಿದ್ದಾರೆ.

ಪ್ರಕರಣದಿಂದ ಹಿಂದೆ ಸರಿದಿರುವುದಕ್ಕೆ ವಿ.ಬಿ. ಮಾಯಾನಿ ಯಾವುದೇ ಕಾರಣ ನೀಡಿಲ್ಲ.

ಅಪರಾಧ ನಿರ್ಣಯದ ವಿರುದ್ಧ ಭಟ್ ಹಾಗೂ ಝಾಲಾ ಇದೇ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ ಮನವಿ ವಿಚಾರಣೆಗೆ ಬಾಕಿ ಇದೆ. 1990ರ ಕಸ್ಟಡಿ ಸಾವಿಗೆ ಸಂಬಂಧಿಸಿ ಭಟ್ ಹಾಗೂ ಝಾಲಾ ಅವರಿಗೆ ಜಾಮ್‌ನಗರದ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News