ಹೊಸ ಕಾಯ್ದೆ: ಒಡಿಶಾ ರಿಕ್ಷಾ ಚಾಲಕನಿಗೆ ವಿಧಿಸಿದ ದಂಡ ಎಷ್ಟು ಗೊತ್ತೇ?

Update: 2019-09-05 03:50 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ, ಸೆ.5: ಹೊಸ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ಗುರುಗ್ರಾಮದಲ್ಲಿ ಮೋಟರ್‌ಸೈಕಲ್ ಸವಾರನಿಗೆ 23 ಸಾವಿರ ರೂ. ದಂಡ ವಿಧಿಸಿದ ಬೆನ್ನಲ್ಲೇ, ಒಡಿಶಾ ರಾಜಧಾನಿಯಲ್ಲಿ ಆಟೊ ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ 47,500 ರೂ.ನ ಭಾರೀ ದಂಡ ವಿಧಿಸಿದ ಘಟನೆ ವರದಿಯಾಗಿದೆ.

ಚಾಲನಾ ಲೈಸನ್ಸ್, ನೋಂದಣಿ ಪ್ರಮಾಣಪತ್ರ, ಪರ್ಮಿಟ್, ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣಪತ್ರ ಮತ್ತು ವಿಮೆ ಇಲ್ಲ ಎಂಬ ಕಾರಣಕ್ಕೆ ರಿಕ್ಷಾ ಚಾಲಕ ಹರಿಬಂಧು ಕನ್ಹಾರ್ ಎಂಬುವವರಿಗೆ ಭುವನೇಶ್ವರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 47,500 ರೂಪಾಯಿ ದಂಡ ವಿಧಿಸಿದ್ದಾರೆ.

ಪರವಾನಿಗೆ ಷರತ್ತುಗಳ ಉಲ್ಲಂಘನೆ, ಮದ್ಯಪಾನ ಮಾಡಿ ಚಾಲನೆ, ವಾಯು ಹಾಗೂ ಶಬ್ದ ಮಾಲಿನ್ಯಕ್ಕಾಗಿ ತಲಾ 10 ಸಾವಿರ ರೂಪಾಯಿ, ಚಾಲನಾ ಲೈಸನ್ಸ್ ಅವಧಿ ಮುಗಿದದ್ದಕ್ಕಾಗಿ ಮತ್ತು ನೋಂದಣಿ ಪ್ರಮಾಣಪತ್ರದ ಅವಧಿ ಮುಗಿದಿದ್ದಕ್ಕಾಗಿ ತಲಾ 5 ಸಾವಿರ, ವಿಮೆ ಇಲ್ಲದೇ ವಾಹನ ಓಡಿಸಿದ್ದಕ್ಕಾಗಿ 2 ಸಾವಿರ ಹಾಗೂ ಸಾಮಾನ್ಯ ಅಪರಾಧಕ್ಕೆ 500 ರೂ. ದಂಡ ವಿಧಿಸಲಾಗಿದೆ ಎಂದು ಕಿರಿಯ ಮೋಟಾರು ವಾಹನ ನಿರೀಕ್ಷಕ ಸಂದೀಪ್ ಪೈಕರೆ ಹೇಳಿದ್ದಾರೆ.

ವಾಹನದ ಮಾಲಕ, ನಯಾಘರ್ ನಿವಾಸಿ ಕಂಡೂರಿ ಖಟೂವಾ ಅವರ ಹೆಸರಿನಲ್ಲಿ ಚಲನ್ ನೀಡಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಚಾಲಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಾಹನ ವಶಪಡಿಸಿಕೊಳ್ಳಲಾಗಿದೆ. ಖಟೂವಾ ಅವರಿಂದ 25 ಸಾವಿರ ರೂಪಾಯಿಗೆ ಈ ಚಾಲಕ ಆಟೊ ಖರೀದಿಸಿದ್ದರು. ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ಒಡಿಶಾದಲ್ಲಿ ವಿಧಿಸಿರುವ ಅತಿಹೆಚ್ಚಿನ ದಂಡ ಮೊತ್ತ ಇದಾಗಿದೆ.

ಒಡಿಶಾ ರಸ್ತೆಗಳು ಅಪಘಾತಕ್ಕೆ ಕುಖ್ಯಾತಿ ಹೊಂದಿದ್ದು, ರಾಜ್ಯದಲ್ಲಿ 2017ಕ್ಕೆ ಹೋಲಿಸಿದರೆ 2018ರಲ್ಲಿ ಅಪಘಾತಗಳ ಪ್ರಮಾಣ ಶೇಕಡ 11ರಷ್ಟು ಹೆಚ್ಚಿದೆ. 2017ರಲ್ಲಿ ರಾಜ್ಯದಲ್ಲಿ 4,790 ಮಂದಿ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದರೆ, ಮರು ವರ್ಷ ಇದು 5,315ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News