ಕುಂದಾಪುರ: ಕಳ್ಳತನ ಆರೋಪಿಯ ಬಂಧನ
ಬ್ರಹ್ಮಾವರ, ಸೆ.5: ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆ ಅಂತಯ್ಯ ಶೆಟ್ಟಿಯವರ ಕಟ್ಟಡದಲ್ಲಿರುವ ರವಿ ಶೆಟ್ಟಿ ಎಂಬವರಿಗೆ ಸೇರಿದ ಶ್ರೀಬೆನಕ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯಿಂದ ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ನಿನ್ನೆ ಪಡು ನೀಲಾವರ ಬಳಿ ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮದ ಹೊಸಾಳ ಗರಡಿ ಸಮೀಪದ ನಿವಾಸಿ ನವೀನ್‌ಕುಮಾರ್ (25) ಬಂಧಿತ ಆರೋಪಿಯಾಗಿದ್ದಾನೆ. ಈತ ರವಿ ಶೆಟ್ಟಿ ಅವರ ಮೊಬೈಲ್ ಅಂಗಡಿಯ ಮಾಡಿನ ಹೆಂಚು ತೆಗೆದು ಒಳಗೆ ನುಗ್ಗಿ ನಾಲ್ಕು ಹೊಸ ಮೊಬೈಲ್ ಸೆಟ್‌ಗಳನ್ನು ಕಳವು ಮಾಡಿದ್ದ ಇವುಗಳ ಅಂದಾಜು ವೌಲ್ಯ 50,000ರೂ.ಗಳಾಗಿದ್ದು, ಪೊಲೀಸರು ಮೊಬೈಲ್‌ಗಳನ್ನು ಮಾತ್ರವಲ್ಲದೇ ಕೃತ್ಯಕ್ಕೆ ಬಳಸಿದ ಪಲ್ಸರ್ ಮೋಟಾರು ಸೈಕಲ್‌ನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಜೈಶಂಕರ್ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ಪ್ರದೀಪ್ ನಾಯಕ್, ವಾಸುದೇವ ಪೂಜಾರಿ, ವಿಕ್ರಮ್, ಶೇಖರ ಹೆಬ್ರಿ, ಎಚ್.ಸಿ.ಪ್ರವೀಣ್ ಶೆಟ್ಟಿಗಾರ್ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.