ಪೆಹ್ಲೂ ಖಾನ್ ಪ್ರಕರಣ: 3 ದಿನಗಳ ನಂತರ ಘಟನಾ ಸ್ಥಳಕ್ಕೆ ತೆರಳಿದ್ದ ತನಿಖಾಧಿಕಾರಿ!

Update: 2019-09-06 10:42 GMT

ಜೈಪುರ್, ಸೆ.6: ರಾಜಸ್ಥಾನದ ಆಲ್ವಾರ್ ನಲ್ಲಿ 2017ರಲ್ಲಿ ನಡೆದ ಪೆಹ್ಲೂ ಖಾನ್ ಗುಂಪು ಹತ್ಯೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಸಾಕ್ಷ್ಯದ ಕೊರತೆಯ ನೆಪದಲ್ಲಿ ಖುಲಾಸೆಗೊಳಿಸಲು ಕಾರಣವೇನೆಂದು ತಿಳಿಯಲು ರಾಜ್ಯ ಸರಕಾರ ರಚಿಸಿದ್ದ ವಿಶೇಷ ತನಿಖಾ ತಂಡವು ಪೊಲೀಸ್ ತನಿಖೆಯಲ್ಲಿನ ಹಲವಾರು ನ್ಯೂನತೆಗಳನ್ನು ಬೊಟ್ಟು ಮಾಡಿದೆಯಲ್ಲದೆ, ಅಸಮರ್ಪಕ ತನಿಖೆ ನಡೆಸಿದ್ದಕ್ಕಾಗಿ ಅಧಿಕಾರಿಗಳನ್ನು ದೂರಿದೆ.

ತನ್ನ 84 ಪುಟಗಳ ವರದಿಯನ್ನು ವಿಶೇಷ ತನಿಖಾ ತಂಡ ರಾಜಸ್ಥಾನದ ಡಿಜಿಪಿ ಭೂಪೇಂದ್ರ ಸಿಂಗ್ ಅವರಿಗೆ ಸಲ್ಲಿಸಿದೆ. ವರದಿಯಲ್ಲಿ ಮಾಡಲಾಗಿರುವ ಎಲ್ಲಾ ಶಿಫಾರಸುಗಳನ್ನು ಪರಿಶೀಲಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ನಾಲ್ಕು ತನಿಖಾಧಿಕಾರಿಗಳ ತನಿಖೆಯಲ್ಲಿನ ಲೋಪದೋಷಗಳನ್ನು ವರದಿ ಎತ್ತಿ ತೋರಿಸಿದೆ. ಮೊದಲ ತನಿಖಾಧಿಕಾರಿ ಘಟನೆ ನಡೆದು ಮೂರು ದಿನಗಳ ನಂತರ ಘಟನಾ ಸ್ಥಳಕ್ಕೆ ತೆರಳಿದ್ದು ಈ ಸಂದರ್ಭ ಫೊರೆನ್ಸಿಕ್ ತಜ್ಞರ ಸೇವೆ ಬಳಸಿಕೊಂಡಿಲ್ಲ, ಜತೆಗೆ  ಪೆಹ್ಲೂ ಖಾನ್  ದನ ಸಾಗಾಟ ನಡೆಸುತ್ತಿದ್ದ ಎರಡು ವಾಹನಗಳ ಮೆಕ್ಯಾನಿಕಲ್ ತಪಾಸಣೆಗೂ ಕ್ರಮ ಕೈಗೊಂಡಿಲ್ಲ, ಈ ಅಧಿಕಾರಿ ಒಟ್ಟು 29 ತಪ್ಪುಗಳನ್ನು ಮಾಡಿದ್ದಾರೆಂದು ವರದಿ ತಿಳಿಸಿದೆ.

ಎರಡನೇ ತನಿಖಾಧಿಕಾರಿ ಮೊದಲ ತನಿಖೆಯ ಲೋಪದೋಷಗಳನ್ನು ನಿರ್ಲಕ್ಷ್ಯಿಸಿದ್ದೇ ಅಲ್ಲದೆ ತನಿಖೆಯನ್ನು ಸಮರ್ಥವಾಗಿ  ಮೇಲ್ವಿಚಾರಣೆ ನಡೆಸಲು ವಿಫಲರಾಗಿದ್ದರೆಂದು ವರದಿ ತಿಳಿಸಿದೆ.

ಮೂರನೇ ತನಿಖಾಧಿಕಾರಿ ಘಟನಾ ಸ್ಥಳಕ್ಕೆ ತೆರಳಿದರೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿಲ್ಲ, ಈ ಹಿಂದಿನ ತನಿಖಾಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸಲೂ ಅವರು ಯತ್ನಿಸಿಲ್ಲ ಎಂದು ವರದಿ ಹೇಳಿದೆ.

ನಾಲ್ಕನೇ ತನಿಖಾಧಿಕಾರಿ ಖಾನ್ ಮೃತರಾಗುವ ಮುನ್ನದ ಹೇಳಿಕೆಯಲ್ಲಿ ಹೆಸರಿಸಿದ್ದ ಆರು ಮಂದಿಯ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯವಿಲ್ಲ ಎಂದು ಹೇಳಿದ್ದರೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News