×
Ad

ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿ ಲೋಕಾರ್ಪಣೆ

Update: 2019-09-06 23:23 IST

ಮಂಗಳೂರು, ಸೆ.6: ನೂತನ ‘ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿ’ಯನ್ನು ಮಂಗಳೂರು ನಗರದ ಕಂಕನಾಡಿ ಜುಮ್ಮಾ ಮಸೀದಿ ಸಮೀಪದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಲೋಕಾರ್ಪಣೆಗೊಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ಸಮಾಜದಲ್ಲಿರುವ ಕೆಲವು ವಿಚಾರ ಕ್ಷುಲ್ಲಕವೆಂದು ಭಾವಿಸದೇ ಅದರ ಕುರಿತು ಜಾಗೃತಿ ಮೂಡಿಸಬೇಕು. ಕೋಟಿಗಟ್ಟಲೇ ಹಣ ಖರ್ಚು ಮಾಡಿ ಮದುವೆ ಮಾಡುವುದನ್ನು ನಾವು ಖಂಡಿಸಬೇಕು ಮತ್ತು ವಿರೋಧಿಸಬೇಕು. ಅದಕ್ಕೆ ಪರ್ಯಾಯವಾಗಿ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. ಈ ಮೂಲಕ ಸಮುದಾಯವನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿಯ ಅಧ್ಯಕ್ಷ ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಪಂಗಡ ಮತ್ತು ಸಂಘಟನೆಗಳ ಭೇದ-ಭಾವ ಇಲ್ಲದೇ ಎಲ್ಲರೂ ಒಗ್ಗಟ್ಟಾಗಬೇಕು. ತ್ಯಾಗ ಬಲಿದಾನಗಳ ಮೂಲಕ ನಾವು ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದ ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿ ಸ್ಥಾಪಕ ರಫೀವುದ್ದೀನ್ ಕುದ್ರೋಳಿ, ಸಮಸ್ಯೆಗಳು ಉದ್ಭವಿಸಿದಾಗ ವ್ಯಕ್ತಿಯ ಸಂಘಟನೆ ನೋಡದೆ, ಆತನ ಸಮುದಾಯದ ಸದಸ್ಯನೆಂಬ ನೆಲೆಯಲ್ಲಿ ಎಲ್ಲರೂ ಒಂದಾಗಿ ಪರಿಹರಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಉಳ್ಳಾಲದ ಸೈಯದ್ ಮದನಿ ದರ್ಗಾ ಕಮಿಟಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಖಾಲಿದ್ ಯು.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅತಿಕುರ್ರಹ್ಮಾನ್ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News