ಭಯೋತ್ಪಾದನೆ ನಿಗ್ರಹಕ್ಕೆ ಮಾತ್ರ ಸೇನೆ ನಿಯೋಜನೆ: ಅಜಿತ್ ದೋವಲ್

Update: 2019-09-07 14:34 GMT

ಹೊಸದಿಲ್ಲಿ, ಸೆ. 7: ಕಾಶ್ಮೀರ ಕಣಿವೆಯಲ್ಲಿ ಸೇನೆಯ ಉಪಸ್ಥಿತಿ ಭಯೋತ್ಪಾದಕರ ವಿರುದ್ಧ ಹೋರಾಡಲು ಮಾತ್ರ ಸೀಮಿತವಾಗಿತ್ತು. ಕಾನೂನು ಸುವ್ಯವಸ್ಥೆ ನಿರ್ವಹಿಸಲು ಪೊಲೀಸರು ಹಾಗೂ ಕೇಂದ್ರ ಪಡೆಗಳು ಇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಹೇಳಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ನಾಯಕರನ್ನು ಬಂಧನದಲ್ಲಿ ಇರಿಸಿರುವುದರ ಬಗ್ಗೆ ಶನಿವಾರ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ಪ್ರತಿಯೊಂದನ್ನೂ ಕಾನೂನಿನ ಚೌಕಟ್ಟಿನಲ್ಲಿ ಮಾಡಲಾಗುತ್ತಿದೆ ಎಂದರು. ‘‘ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವ ಪರಿಸರ ಸೃಷ್ಟಿಯಾಗುವ ವರೆಗೆ ಅವರು ಗೃಹಬಂಧನದಲ್ಲಿ ಇರಲಿದ್ದಾರೆ’’ ಎಂದು ಅವರು ಹೇಳಿದರು. ವಶದಲ್ಲಿರುವ ನಾಯಕರ ವಿರುದ್ಧ ಕ್ರಿಮಿನಲ್ ಅಥವಾ ದೇಶ ದ್ರೋಹದ ಆರೋಪ ದಾಖಲಿಸುವ ವದಂತಿ ತಳ್ಳಿ ಹಾಕಿದ ಅವರು, ಗೃಹ ಬಂಧನದಲ್ಲಿ ಇರುವವರು ನ್ಯಾಯಾಲಯದಲ್ಲಿ ತಮ್ಮ ಬಂಧನ ಪ್ರಶ್ನಿಸಬಹುದು ಎಂದಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ಶೇ. 95.2 ಪ್ರದೇಶ ನಿರ್ಬಂಧ ರಹಿತವಾಗಿದೆ ಎಂದು ದೋವಲ್ ತಿಳಿಸಿದರು. ಆಯ್ದ ಪತ್ರಕರ್ತರ ಗುಂಪಿನೊಂದಿಗೆ ವ್ಯಾಪಕ ಚರ್ಚೆ ನಡೆಸಿದ ದೋವಲ್, ಕಾಶ್ಮೀರ, ಜಮ್ಮು, ಲಡಾಕ್ ಜಿಲ್ಲೆಗಳ 199 ಪೊಲೀಸ್ ಠಾಣೆಗಳಲ್ಲಿ 10 ಪೊಲೀಸ್ ಠಾಣೆಗಳಲ್ಲಿ ಮಾತ್ರ ನಿಷೇಧಾಜ್ಞೆ ಅಸ್ತಿತ್ವದಲ್ಲಿ ಇದೆ. ಈ ಮೂರೂ ಪ್ರದೇಶದಲ್ಲಿ ಶೇ. 100 ಲ್ಯಾಂಡ್‌ಲೈನ್ ಟೆಲಿಫೋನ್ ಸೇವೆ ಮರು ಆರಂಭಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News