ನೀತಿ ಆಯೋಗದಲ್ಲಿದ್ದ ಐಎಎಸ್ ಅಧಿಕಾರಿ ರಾಜೀನಾಮೆ
ಹೊಸದಿಲ್ಲಿ, ಸೆ. 7: ಅರುಣಾಚಲಪ್ರದೇಶಕ್ಕೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಬಗ್ಗೆ ಅಸಮಾಧಾನಗೊಂಡಿರುವ 2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಕಾಶಿಶ್ ಮಿತ್ತಲ್ ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತೀಚೆಗಿನ ವಾರಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ನಾಲ್ಕನೇ ಐಎಎಸ್ ಅಧಿಕಾರಿ ಕಾಶಿಶ್ ಮಿತ್ತಲ್. ಮಿತ್ತಲ್ ಎಜಿಎಂಯುಟಿ (ಅರುಣಾಚಲಪ್ರದೇಶ-ಗೋವಾ- ಮಿಝೊರಾಂ-ಕೇಂದ್ರಾಡಳಿತ ಪ್ರದೇಶ) ಶ್ರೇಣಿಯ ಅಧಿಕಾರಿ. ಅವರು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಹೆಚ್ಚುವರಿ ಪ್ರಾಥಮಿಕ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದರು.
ಅರುಣಾಚಲಪ್ರದೇಶಕ್ಕೆ ವರ್ಗಾವಣೆ ಮಾಡಿದ ಕೇಂದ್ರ ಸರಕಾರದ ನಿರ್ಧಾರದಿಂದ ಅವರು ಅಸಮಾಧಾನಗೊಂಡು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸರಕಾರದ ಚಿಂತನ ಚಿಲುಮೆ ಮೂಲಗಳು ತಿಳಿಸಿವೆ. ‘‘ಕೇಂದ್ರ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಇದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಅವರ ವರ್ಗಾವಣೆ ಆದೇಶ ಬಂದಿದೆ. ಬಹುಶಃ ಇದು ಅನ್ಯಾಯ ಎಂದು ಅವರು ಭಾವಿಸಿದಂತಿದೆ’’ ಎಂದು ಮೂಲಗಳು ತಿಳಿಸಿವೆ.
ವರ್ಗಾವಣೆ ಬಗ್ಗೆ ಮಿತ್ತಲ್ ವಿರೋಧ ವ್ಯಕ್ತಪಡಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ 2016ರಲ್ಲಿ ಅವರನ್ನು ಚಂಡಿಗಢಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದರ ವಿರುದ್ಧ ಅವರು ಕೇಂದ್ರ ಆಡಳಿತ ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಿದ್ದರು.