ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಕಾನ್‍ ಸ್ಟೇಬಲ್ ಗೆ 34,000 ರೂ. ದಂಡ

Update: 2019-09-07 14:38 GMT

ರಾಂಚಿ, ಸೆ.7: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ರಾಂಚಿಯ ಪೊಲೀಸ್ ಕಾನ್‍ ಸ್ಟೇಬಲ್ ಒಬ್ಬರಿಗೆ ಸೆಪ್ಟಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆಯನ್ವಯ 34,000 ರೂ. ದಂಡ ವಿಧಿಸಲಾಗಿದೆ.

ಕಾನ್‍ಸ್ಟೇಬಲ್ ರಾಕೇಶ್ ಕುಮಾರ್ ಅವರು  ಎಎಸ್‍ಐ (ಸಂಚಾರ) ಪರಮೇಶ್ವರ್ ರೈ ಅವರನ್ನು ಹಿಂದುಗಡೆ ಕೂರಿಸಿಕೊಂಡು ಸಾಗುತ್ತಿದ್ದಾಗ ರಾಂಚಿ ಟ್ರಾಫಿಕ್ ಎಸ್ಪಿ  ಅಜಿತ್ ಪೀಟರ್ ಅವರ ಕೈಗೆ ಗುರುವಾರ ರಾತ್ರಿ ಸಿಕ್ಕಿ ಬಿದ್ದಿದ್ದರು. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಮೇಲಾಗಿ  ಡ್ರೈವಿಂಗ್ ಲೈಸನ್ಸ್ ಸಹಿತ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದಾಗ ಆತನ ಬಳಿ ಯಾವುದೂ ಇರದೇ ಇರುವುದನ್ನು ಕಂಡು 34,000 ರೂ . ದಂಡ ವಿಧಿಸಲಾಗಿದೆ.

ಸಾಮಾನ್ಯವಾಗಿ ಇಂತಹ ತಪ್ಪಿಗೆ 17,000 ರೂ. ದಂಡದ ಮೊತ್ತ ಆಗಿದ್ದರೂ ಕಾನೂನು ರಕ್ಷಕರೇ ಉಲ್ಲಂಘನೆಯಲ್ಲಿ ತೊಡಗಿದರೆ ದಂಡ ದ್ವಿಗುಣವಾಗುವುದೆಂಬ ಕಾಯಿದೆಯ ನಿಯಮದಂತೆ ರೂ 34,000 ದಂಡ ವಿಧಿಸಲಾಗಿದೆ.

ತಮ್ಮನ್ನು ಮನೆ ತನಕ ಡ್ರಾಪ್ ಮಾಡುವಂತೆ ರೈ ಅವರು ಕಾನ್‍ಸ್ಟೇಬಲ್  ರಾಕೇಶ್ ಜತೆ ಹೇಳಿದ್ದರಿಂದ ಇಬ್ಬರೂ ಹೆಲ್ಮೆಟ್ ಧರಿಸದೆಯೇ ತೆರಳಿದಾಗ ಸಿಕ್ಕಿ ಬಿದ್ದಿದ್ದರು. ಹಿಂಬದಿ ಸವಾರ  ಎಸ್‍ಐ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News