×
Ad

ಬಂಟ್ವಾಳ: ಸಾರ್ವಜನಿಕ ಕುಂದುಕೊರತೆ ಸಭೆ, ಅಹವಾಲು ಸ್ವೀಕಾರ ಕಾರ್ಯಕ್ರಮ

Update: 2019-09-07 20:36 IST

ಬಂಟ್ವಾಳ, ಸೆ. 7: ಬಂಟ್ವಾಳ ತಾಲೂಕು ಮಟ್ಟದ ಎಲ್ಲ ಇಲಾಖೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಜರಗಿತು.

ತಹಶೀಲ್ದಾರ್ ರಶ್ಮಿ ಎಸ್.ಆರ್. ಉಪಸ್ಥಿತಿಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕೆ.ಎನ್. ಮಾದಯ್ಯ ಅವರು ಸಭೆಯನ್ನು ಉದ್ಘಾಟಿಸಿದರು. ತಾಲೂಕಿನ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಅಕ್ರಮ ಒತ್ತುವರಿ ಮಾಡಲಾಗಿದೆ. ಬಿಮೂಡಾ ಗ್ರಾಮದಲ್ಲಿ 11 ಸೆಂಟ್ಸ್‍ನಲ್ಲಿದ್ದ ಕೆರೆಗೆ ಮಣ್ಣು ತುಂಬಿಸಲಾಗಿದೆ. ಕೆರೆಯ ಒತ್ತುವರಿಯ ಕುರಿತು ಆರ್‍ಟಿಸಿ ನಂಬರ್ ನೀಡಿ ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗ, ಆರ್‍ಟಿಸಿ ನಂಬರ್ ಬದಲಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪಾಣೆಮಂಗಳೂರು ನಿವಾಸಿ ಶಬೀರ್ ಅವರು ದೂರಿಕೊಂಡರು. ಅದಲ್ಲದೆ, ಆಲಡ್ಕ ಹೆದ್ದಾರಿಯ ಸಮೀಪದ ರಾಜಕಾಲುವೆಯನ್ನು ಒತ್ತುವರಿಯಿಂದ ಕಾಲುವೆಯು ಕಿರಿದಾಗಿದೆ. ಇದೀಗ ಮಳೆಯ ನೀರು ಸರಾಗವಾಗಿ ಹರಿಯದೇ ಇಲ್ಲಿನ ಪ್ರದೇಶಗಳ ಕೃಷಿ ಭೂಮಿ ಸಹಿತ ತೋಟಗಳಿಗೆ ನೀರು ನಿಲ್ಲುವಂತಾಗಿದೆ ಎಂದು ಆರೋಪಿಸಿದರು. ವಾರದೊಳಗೆ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.

ಸಜೀಪಮುನ್ನೂರು ಗ್ರಾಮದ ಪ್ರಕರಣವೊಂದಕ್ಕೆ ಸಂಬಂಧಿಸಿ ತಾನು 2004ನೇ ಇಸವಿಯಲ್ಲಿ ದೂರು ನೀಡಿ, ತನಿಖೆ ನಡೆದರೂ ಇನ್ನೂ ಆರೋಪ ಹೊತ್ತವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ರೈತಮುಖಂಡ ಬಿ.ಕೆ.ಇದಿನಬ್ಬ ಹೇಳಿದರು.

ಮನೆ ಮೇಲೆ ಬರ ಬೀಳುವಂತಿದ್ದು, ದೂರು ನೀಡಿ ಹಲವು ತಿಂಗಳಾದರೂ ಕ್ರಮ ಕೈಗೊಂಡಿಲ್ಲವೇಕೆ ಎಂದು ಕೆಳಗಿನಪೇಟೆಯ ಮುಹಮ್ಮದ್ ಶಾಹುಲ್ ಹಮೀದ್ ಹೇಳಿದಾಗ, ಕೂಡಲೇ ಕ್ರಮ ಕೈಗೊಳ್ಳಲು ಎಸ್ಪಿ ಅವರು ಇಲಾಖಾಧಿಕಾರಿಗೆ ಸೂಚಿಸಿದರು.

ಬಾನುಚಂದ್ರ ಅವರು, ಸಭೆಯ ಮಾಹಿತಿಯಿಲ್ಲದಿರುವ ಬಗ್ಗೆ ಪ್ರಸ್ತಾಪಿಸಿದಾಗ, 15ದಿನಗಳ ಮೊದಲೇ ಮಾಹಿತಿ ನೀಡಿಲಾಗಿದೆ. ಈ ಬಗ್ಗೆ ಪತ್ರಿಕೆ ಗಳಲ್ಲಿ ಸುದ್ದಿಗಳು ಪ್ರಕಟವಾಗಿದೆ ಎಂದು ಪೆÇಲೀಸ್ ಅಧೀಕ್ಷಕ ಕೆ.ಎನ್. ಮಾದಯ್ಯ ಪ್ರತಿಕ್ರಿಯಿಸಿದಾಗ, ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಕುರಿತು ಮಾಹಿತಿಯನ್ನು ವಾರದ ಮೊದಲೇ ಎಲ್ಲ ಸರಕಾರಿ ಕಚೇರಿಗಳ ಮುಂದೆ ಬ್ಯಾನರ್ ಕಟ್ಟುವುದರ ಮೂಲಕ ಪ್ರಚಾರ ನೀಡಬೇಕು ಎಂದು ಪತ್ರಕರ್ತ ಫಾರೂಕ್ ಬಂಟ್ವಾಳ ಸಲಹೆ ನೀಡಿದರು.

ಅಮ್ಟೂರು ಗ್ರಾಮದ ಕೃಷ್ಣಾಪುರದಲ್ಲಿ 1.76 ಕೋಟಿ ರೂ. ಗ್ರಾಮ ಸಡಕ್ ರಸ್ತೆ ಇನ್ನೂ ಆಗಿಲ್ಲ. ಈ ಬಗ್ಗೆ ದಾಖಲೆ ಸಹಿತ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಭಾನುಚಂದ್ರ ಕೃಷ್ಣಾಪುರ ದೂರಿದರು.

ಪುರಸಭಾ ವ್ಯಾಪ್ತಿಯ ಸಮಸ್ಯೆ

ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಸ ವಿಲೇವಾರಿ, ಬಿ.ಸಿ.ರೋಡಿನ ಪಾರ್ಕಿಂಗ್ ಮತ್ತು ಗೂಡಂಗಡಿ ಸಮಸ್ಯೆಗಳು ಅಹವಾಲು ಆಲಿಕೆ ಸಂದರ್ಭವೂ ವ್ಯಕ್ತವಾದವು.

ಸಾಮಾಜಿಕ ಕಾರ್ಯಕರ್ತ ಭಾನುಚಂದ್ರ ಕೃಷ್ಣಾಪುರ ವಿಷಯ ಪ್ರಸ್ತಾಪಿಸಿದಾಗ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು, ನರಿಕೊಂಬು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಎಸೆಯುತ್ತಾರೆ ಎಂದರು. ಈ ಸಂದರ್ಭ ಎಸ್ಪಿ ಮಾದಯ್ಯ ಅವರು ತಾಪಂ ಇಒ ಮತ್ತು ಪುರಸಭೆ ಮುಖ್ಯಾಧಿಕಾರಿ ಇಬ್ಬರಿಗೂ ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದೇ ವೇಳೆ ಪೌರಕಾರ್ಮಿಕರಿಗೆ ಮಾಸ್ಕ್ ಕೊಟ್ಟಿರುವುದಾಗಿ ಹೇಳಿಕೆಯನ್ನಷ್ಟೇ ನೀಡಿದ್ದು, ಅದಿನ್ನೂ ಕಾರ್ಮಿಕರ ಕೈಸೇರಿಲ್ಲ ಎಂದು ಭಾನುಚಂದ್ರ ಕೃಷ್ಣಾಪುರ ದೂರಿದರು. ಫ್ಲೈಓವರ್, ಪಾರ್ಕಿಂಗ್ ವಿಚಾರದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ನಗರ ಸೌಂದರ್ಯೀಕರಣ ಯೋಜನೆ ರೂಪಿಸುತ್ತಿದ್ದು, ಅದು ಅನುಷ್ಠಾನವಾದ ಮೇಲಷ್ಟೇ ಸರಿಯಾಗಬಹುದು ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹೇಳಿದರು.

ತಾಲೂಕಿನ ವಿವಿಧೆಡೆಯಿಂದ ಮಿನಿವಿಧಾನ ಸೌಧಕ್ಕೆ ಸರಕಾರಿ ಕೆಲಸಕ್ಕಾಗಿ ಬರುತ್ತಿದ್ದು, ಆದರೆ ಇಲ್ಲಿನ ಶೌಚಾಲಯಕ್ಕೆ ಬೀಗ ಹಾಕಲಾಗಿರುತ್ತದೆ ಎಂದು ಮಲಿಕ್ ಕೊಳಕೆ ದೂರಿಕೊಂಡರು.

ಕಂದಾಯ ಇಲಾಖೆ ದಾಖಲೆ ಪೋರ್ಜರಿ ಆಗುತ್ತಿದೆ ಎಂದು ಜನಾರ್ದನ ದೂರಿದರೆ, ಡಾಕ್ಯುಮೆಂಟ್ ನೊಂದಿಗೆ ಪೆÇಲೀಸ್ ಠಾಣೆಗೆ ದೂರು ನೀಡಲು ಇಲಾಖಾಧಿಕಾರಿಗಳು ಸೂಚಿಸಿದರು. ತಾಲೂಕು ಕಚೇರಿಯ ಲಿಫ್ಟ್ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು. ರಾಜ ಪಲ್ಲಮಜಲು, ಈಶ್ವರ ಭಟ್ ಮಂಚಿ, ಹಾರೂನ್ ರಶೀದ್ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.

ಸುಮಾರು 25ಕ್ಕೂ ಅಧಿಕ ದೂರುಗಳು ಅಹವಾಲು ಸ್ವೀಕಾರ ಸಂದರ್ಭ ದಾಖಲಾದವು.

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್, ಕಲಾವತಿ, ಪೊಲೀಸ್ ನಿರೀಕ್ಷಕಿ ಭಾರತಿ, ಸಿಬ್ಬಂದಿ ಶಶಿಧರ್, ಸುರೇಂದ್ರ, ಲೋಕೇಶ, ಪ್ರದೀಪ್, ರಾಧೇಶ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News