×
Ad

ದ.ಕ. ಜಿಲ್ಲಾಧಿಕಾರಿ ರಾಜೀನಾಮೆ ಹಿಂಪಡೆಯಲು ಆಗ್ರಹಿಸಿ ಧರಣಿ

Update: 2019-09-07 20:44 IST

ಮಂಗಳೂರು, ಸೆ. 7: ಜನಪರ ಕಾಳಜಿಯುಳ್ಳ, ಬಡವರ ಶೋಷಿತರ ಪರವಾಗಿ ಸಾಕಷ್ಟು ಕೆಲಸ ಮಾಡಿರುವ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದೇಶದ ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆ ಸ್ವಯಂಪ್ರೇರಿತ ರಾಜೀನಾಮೆ ನೀಡಿರುವುದು ತೀರಾ ನೋವಿನ ಸಂಗತಿ. ಜಿಲ್ಲಾಧಿಕಾರಿ ಕೂಡಲೇ ರಾಜೀನಾಮೆ ಹಿಂಪಡೆಯಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ ನಡೆಸಲಾಯಿತು.

ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ, ಸಿಪಿಎಂ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳ ಜಂಟಿ ನೇತೃತ್ವದಲ್ಲಿ ಶನಿವಾರ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ದೇಶದ ಸಂವಿಧಾನದ ಮೇಲೆ ತೀವ್ರ ದಾಳಿ ನಡೆಯುತ್ತಿರುವಾಗ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲದ ವಾತಾವರಣ ದೇಶದಲ್ಲಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದಲ್ಲಿ ದಕ್ಷ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣಗೊಳ್ಳಲು ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವ ಕೇಂದ್ರ ಸರಕಾರವೇ ನೇರ ಕಾರಣ. ಈಗಾಗಲೇ ಹಲವು ದಕ್ಷ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ, ರಾಜೀನಾಮೆಗಾಗಿ ಒತ್ತಡ, ಜೀವ ಬೆದರಿಕೆಗಳಂತಹ ದುಷ್ಕೃತ್ಯಗಳನ್ನು ಕೇಂದ್ರ ಸರಕಾರವೇ ಮಾಡುತ್ತಿರುವುದು ತೀರಾ ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯ ನಾಯಕ, ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಸೆಂಥಿಲ್ ಬಡವ ಶ್ರೀಮಂತರೆಂಬ ಭೇದ-ಭಾವವಿಲ್ಲದೆ ಎಲ್ಲರ ಜೊತೆಗೂ ಆತ್ಮೀಯರಾಗಿ ವರ್ತಿಸುತ್ತಿದ್ದರು. ಎಲ್ಲರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು. ಅವರ ರಾಜೀನಾಮೆಯ ಹಿಂದೆ ಕಾಣದ ಕೈಗಳ ಪಾತ್ರವಿದೆ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರೀ ಧಕ್ಕೆ ಬರಲಿದೆ ಎಂಬ ಹಿನ್ನೆಲೆಯಲ್ಲಿ ಸೆಂಥಿಲ್ ರಾಜೀನಾಮೆ ನೀಡಿರುವುದು ಇಡೀ ದೇಶದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಈಗಾಗಲೇ ಕೇಂದ್ರ ಸರಕಾರದ ಕಿರುಕುಳದಿಂದಾಗಿ ‘ಆರ್‌ಬಿಐ’ ಅಧಿಕಾರಿಗಳಾದ ರಘುರಾಮ ರಾಜನ್, ಊರ್ಜಿತ್ ಪಟೇಲ್ ಅವರಂಥವರೇ ರಾಜೀನಾಮೆ ನೀಡಬೇಕಾಯಿತು. ಕೇಂದ್ರದ ಮೋದಿ, ಶಾ ಆಡಳಿತದ ದಮನಕಾರಿ ನೀತಿಗಳನ್ನು ಹಿಮ್ಮೆಟ್ಟಿಸಲು ಎಲ್ಲ ವರ್ಗದ ಜನತೆ ಒಂದಾಗಿ ದೇಶದ ಸಂವಿಧಾನ ಉಳಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್‌ಕುಮಾರ್ ಬಜಾಲ್ ಮಾತನಾಢಿ, ದೇಶದಲ್ಲಿ ಸಂವಿಧಾನಬದ್ಧವಾಗಿ ನಡೆಯಬೇಕಾದ ಸರಕಾರವೇ ಸಂವಿಧಾನದ ಆಶಯಗಳನ್ನು ಬುಡಮೇಲುಗೊಳಿಸಲು ಹೊರಟಿದೆ. ಜಾತ್ಯತೀತ ತತ್ವವನ್ನು ಪ್ರತಿಪಾದಿಸಬೇಕಾದ ಸರಕಾರವೇ ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಡುತ್ತಿದೆ. ಇಂತಹ ಅಪಾಯದ ಸನ್ನಿವೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ರುವುದು ಪ್ರತಿಯೊಬ್ಬರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಮುಖಂಡ ಎಂ.ಬಿ. ಸದಾಶಿವ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ನಾಯಕ ಸೀತಾರಾಮ ಬೇರಿಂಜ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಸಿಪಿಎಂ ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ್, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಗಂಗಯ್ಯ ಅಮೀನ್, ಸಿಪಿಎಂ ಜಿಲ್ಲಾ ಮುಖಂಡರಾದ ಎಚ್.ವಿ. ರಾವ್, ಕರುಣಾಕರ್, ಭಾರತಿ ಶಂಭೂರು, ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಜೆಡಿಎಸ್ ಜಿಲ್ಲಾ ನಾಯಕರಾದ ಅಕ್ಷಿತ್ ಸುವರ್ಣ, ವಸಂತ ಪೂಜಾರಿ, ಪುಷ್ಪ ರಾಜನ್, ರಮೀಜಾಬಾನು, ನಾಸಿರ್, ಸುಮತಿ ಹೆಗ್ಡೆ, ಎಂ.ಎಸ್. ಮುಹಮ್ಮದ್, ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News