ಹೊತ್ತಿ ಉರಿಯುತ್ತಿರುವ ಅಮೆಝಾನ್ ಉಳಿಸಲು ಜಾಗತಿಕ ಸಮುದಾಯ ಮಧ್ಯಪ್ರವೇಶಿಸಬಹುದೇ?

Update: 2019-09-07 16:20 GMT

ಪ್ಯಾರಿಸ್, ಸೆ. 7: ಹೊತ್ತಿ ಉರಿಯುತ್ತಿರುವ ಅಮೆಝಾನ್ ದಟ್ಟಾರಣ್ಯವನ್ನು ಉಳಿಸಲು ಬ್ರೆಝಿಲ್ ವಿಫಲವಾದರೆ, ಇತರ ದೇಶಗಳು ಕ್ರಮಕ್ಕೆ ಮುಂದಾಗಬಹುದೇ?

ಜಾಗತಿಕ ಪ್ರಾಕೃತಿಕ ಸಮತೋಲನವನ್ನು ಕಾಪಾಡುತ್ತಿರುವ ಅಮೆಝಾನ್ ಅರಣ್ಯ ಸುಟ್ಟು ಹೋಗುತ್ತಿರುವ ಬಗ್ಗೆ ಜಾಗತಿಕ ಕಳವಳ ವ್ಯಕ್ತವಾಗುತ್ತಿರುವಂತೆಯೇ, ಈ ಕಲ್ಪನೆ ಹಲವರ ಮನಸ್ಸಿನಲ್ಲಿ ಮೂಡಿದೆ. ಅಂತರ್‌ರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸುವ ಕಲ್ಪನೆಗೆ ಕೆಲವು ಪರಿಸರ ಕಾರ್ಯಕರ್ತರು ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬೆಂಬಲ ವ್ಯಕ್ತಪಡಿಸಿದ್ದಾರೆ.

‘‘ಬ್ರೆಝಿಲ್‌ನ ಅಮೆಝಾನ್ ದಟ್ಟಾರಣ್ಯಕ್ಕೆ ಅಂತರ್‌ರಾಷ್ಟ್ರೀಯ ಸ್ಥಾನಮಾನ ನೀಡುವ ಬಗ್ಗೆ ಸಾಮಾಜಿಕ ಸಂಸ್ಥೆಗಳು ಮತ್ತು ಸರಕಾರೇತರ ಸಂಘಟನೆಗಳು ಹಲವು ವರ್ಷಗಳಿಂದ ಪ್ರಸ್ತಾವಗಳನ್ನು ಮಂಡಿಸುತ್ತಾ ಬಂದಿವೆ’’ ಎಂಬುದಾಗಿ ಆಗಸ್ಟ್ ಅಂತ್ಯದಲ್ಲಿ ನಡೆದ ಜಿ7 ದೇಶಗಳ ಶೃಂಗ ಸಮ್ಮೇಳನದಲ್ಲಿ ಮ್ಯಾಕ್ರೋನ್ ಹೇಳಿದ್ದರು.

‘‘ಸಾರ್ವಭೌಮ ದೇಶವೊಂದು ಭೂ ಗ್ರಹದ ಹಿತಾಸಕ್ತಿಗೆ ಸ್ಪಷ್ಟವಾಗಿ ವಿರುದ್ಧವಾದ ಕೃತ್ಯಗಳಲ್ಲಿ ತೊಡಗಿದರೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗಬಹುದು’’ ಎಂದು ಮ್ಯಾಕ್ರೋನ್ ಹೇಳಿದ್ದರು.

ಜಗತ್ತಿನ ಅತಿ ದೊಡ್ಡ ಮಳೆಯಾರಣ್ಯವಾಗಿರುವ ಅಮೆಝಾನ್‌ಗೆ ಈ ವರ್ಷ ಸುಮಾರು 90,000 ಬಾರಿ ಬೆಂಕಿ ಹೊತ್ತಿಕೊಂಡಿದೆ. ಜಗತ್ತಿನ ಪರಿಸರ ಮತ್ತು ಜಲ ಸಂಪನ್ಮೂಲಗಳನ್ನು ನಿಯಂತ್ರಿಸುವಲ್ಲಿ ಈ ಅರಣ್ಯದ ಪಾತ್ರ ಮಹತ್ವದ್ದಾಗಿದೆ.

ಫ್ರಾನ್ಸ್ ಅಧ್ಯಕ್ಷರ ‘ವಸಾಹತುಶಾಹಿ ಧೋರಣೆ’: ಬ್ರೆಝಿಲ್ ಅಧ್ಯಕ್ಷ

ಅಮೆಝಾನ್ ಅರಣ್ಯದಲ್ಲಿ ಅಂತರ್‌ರಾಷ್ಟ್ರೀಯ ಮಧ್ಯಪ್ರವೇಶದ ಫ್ರಾನ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಪ್ರಸ್ತಾವಕ್ಕೆ ಬ್ರೆಝಿಲ್‌ನ ಕಡು ಬಲಪಂಥೀಯ ಅಧ್ಯಕ್ಷ ಜೈರ್ ಬೊಲ್ಸೊನಾರೊ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

ಬೊಲ್ಸೊನಾರೊ ಅವರ ನೀತಿಗಳೇ ಅಮೆಝಾನ್ ಅರಣ್ಯದ ಕಾಡ್ಗಿಚ್ಚು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಅಮೆಝಾನ್ ವಿಷಯದಲ್ಲಿ ನಮ್ಮ ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಮೂಲಕ ಫ್ರಾನ್ಸ್ ಅಧ್ಯಕ್ಷರು ‘ವಸಾಹತುಶಾಹಿ ಧೋರಣೆ’ಯನ್ನು ಪ್ರದರ್ಶಿಸಿದ್ದಾರೆ ಎಂದು ಬೊಲ್ಸೊನಾರೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News