×
Ad

​ಸೆ.10ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಉಡುಪಿಗೆ

Update: 2019-09-07 21:56 IST

ಉಡುಪಿ, ಸೆ.7: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳೂರಿನ ಸಂಸದ ನಳಿನ್‌ಕುಮಾರ್ ಕಟೀಲು ಅವರು ಸೆ.10 ಮಂಗಳವಾರ ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರನ್ನು ಭವ್ಯವಾಗಿ ಸ್ವಾಗತಿಸಿ ಸನ್ಮಾನಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ತಿಳಿಸಿದ್ದಾರೆ.

ಕಡಿಯಾಳಿಯ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಳಿನ್‌ಕುಮಾರ್ ಅವರು ಬೆಳಗ್ಗೆ 10ಗಂಟೆಗೆ ಜಿಲ್ಲೆಯನ್ನು ಪ್ರವೇಶಿಸಲಿದ್ದು ಹೆಜಮಾಡಿ ಟೋಲ್‌ಗೇಟ್ ಬಳಿ ಅವರಿಗೆ ಭವ್ಯ ಸ್ವಾಗತ ನೀಡಲಾಗುವುದು. ಬಳಿಕ ಕಾಪುವಿನಿಂದ ಅವರನ್ನು ವಾಹನಗಳ ಮೆರವಣಿಗೆಯಲ್ಲಿ ಕರೆತರಲಾಗುವುದು. ಜೋಡುಕಟ್ಟೆ ಬಳಿ, ಜಿಲ್ಲೆಯ ನಾಯಕರು, ಜನಪ್ರತಿನಿಧಿಗಳು ಅವರಿಗೆ ಅದ್ದೂರಿ ಸ್ವಾಗತ ನೀಡಿ ತೆರೆದ ಜೀಪಿನಲ್ಲಿ ನಗರಕ್ಕೆ ಕರೆತರಲಾಗುವುದು.

ಬಳಿಕ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಅವರಿಗೆ ಅದ್ದೂರಿನ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಮಟ್ಟಾರು, ಅಪರಾಹ್ನ 1:30ಕ್ಕೆ ಪಕ್ಷದ ಕಚೇರಿಯಲ್ಲಿ ಅಪೇಕ್ಷಿತ ಕಾರ್ಯಕರ್ತರ ಸಭೆ ನಡೆಯಲಿದೆ. ಇದಾದ ಬಳಿಕ ಸಂಜೆ 4ಗಂಟೆ ಸುಮಾರಿಗೆ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಆ ಬಳಿಕ ಕಟೀಲ್, ಸಂಘ ಪರಿವಾರದ ಜಿಲ್ಲೆಯ ಹಿರಿಯ ನಾಯಕರನ್ನು ಭೇಟಿ ಮಾಡುವರು ಎಂದರು.

ಪಕ್ಷದ ರಾಜ್ಯ ಕೋರ್‌ಕಮಿಟಿಯ ಸಭೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ ನಡೆಸುವ ಬಗ್ಗೆ, ಮುಂದೆ ನಡೆಯುವ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದೂ ಮಟ್ಟಾರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಗಿರೀಶ್ ಆಂಚನ್, ಯುವ ಮೋರ್ಚಾ ನಾಯಕರಾದ ಶ್ರೀಶನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News