ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಲು ಕಲ್ಯಾಣ ಮಂಡಳಿಯಿಂದ ಸಹಾಯಧನಕ್ಕೆ ಎಐಟಿಯುಸಿ ಆಗ್ರಹ
ಉಡುಪಿ, ಸೆ.7: ತಮ್ಮ ಶ್ರಮ ಹಾಗೂ ಕೆಲಸದಿಂದ ಸುಂದರವಾದ ಮನೆ, ದೇವಾಲಯ, ವಿವಿಧ ಕಟ್ಟಡಗಳನ್ನು ನಿರ್ಮಿಸುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ತಮ್ಮದೇ ಆದ ಸ್ವಂತ ಸೂರು ನಿರ್ಮಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಎರಡು ಲಕ್ಷ ರೂ. ಸಹಾಯಧನ ಮಂಜೂರು ಮಾಡುವಂತೆ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 10ನೇ ವಾರ್ಷಿಕ ಮಹಾಸಭೆಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ನಗರದ ಚಿತ್ತರಂಜನ್ ಸರ್ಕಲ್ ಬಳಿ ಇರುವ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಗಣಪತಿ ಪ್ರಭು ಹಿರಿಯಡ್ಕ ಇವರ ಅಧ್ಯಕ್ಷತೆಯಲ್ಲಿ ಡೆದ ವಾರ್ಷಿಕ ಮಹಾಸಭೆ ಜರಗಿತು.
2019ನೇ ಸಾಲಿನಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ಎಲ್ಲಾ ಕ್ಲೈಮ್ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಿರುವುದರಿಂದ ಕಾರ್ಮಿಕರು ಸೈಬರ್ ಸೆಂಟರ್ ಗಳಿಗೆ ಅಲೆದಾಡುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ದಿನಗಟ್ಟಲೆ ಕಾಯುವಂತಾಗಿದೆ. ಸರಿಯಾದ ಶುಲ್ಕ ಪಾವತಿಸುವ ಬಗ್ಗೆಯೂ ಸರಿಯಾದ ನಿರ್ದೇಶನವಿಲ್ಲದೆ ಮನಬಂದಂತೆ ಶುಲ್ಕ ವಿಧಿಸುತ್ತಿರುವುದು ಕಾರ್ಮಿಕರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಸಭೆಯಲ್ಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಕಾಲರ್‌ಶಿಪ್ ಅರ್ಜಿಗಳನ್ನು ಸಲ್ಲಿಸಲು ಮತ್ತು ಮದುವೆಯ ಅರ್ಜಿ, ನಿವೃತ್ತಿ ವೇತನ ಅರ್ಜಿಗಳನ್ನು ಸಲ್ಲಿಸಲು ಸಮಯ ಮಿತಿ ಇರುವುದರಿಂದ ಆನ್‌ಲೈನ್ ವ್ಯವಸ್ಥೆಯಿಂದ ಸಮಯಕ್ಕೆ ಸರಿಯಾಗಿ ಅರ್ಜಿಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಸಮಯ ಮಿತಿ ದಾಟಿದರೂ ಇವರ ಅರ್ಜಿಗಳನ್ನು ತಿರಸ್ಕರಿಸದೇ ಪುರಸ್ಕರಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಪ್ರಸಕ್ತ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಸಿಗುತ್ತಿರುವ ಮಾಸಿಕ ಪಿಂಚಣಿ ಅತೀ ಕಡಿಮೆಯಾಗಿದ್ದು, ಇದನ್ನು ಕನಿಷ್ಟ 6,000ರೂ. ನಿಗದಿಪಡಿಸಬೇಕು. ಮದುವೆ ಧನ ಸಹಾಯವನ್ನು ಮದುವೆ ಖರ್ಚುವೆಚ್ಚಕ್ಕಾಗಿ ಪೂರ್ತಿಯಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಮುಂತಾದ ಬೇಡಿಕೆಗಳ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಕಟ್ಟಡ ಕಾರ್ಮಿಕರು ತಮ್ಮ ಸಂಘಟಿತ ಹೋರಾಟದಿಂದ ಪಡೆದಿರುವ ಹಲವಾರು ಸೌಲಭ್ಯಗಳನ್ನು ಮೊಟಕುಗೊಳಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾರ್ಮಿಕ ಹಿತರಕ್ಷಣಾ ಕಾಯ್ದೆಗಳಿಗೆ ತಿದ್ದುಪಡಿ ತರಲು ನಡೆಸಿರುವ ಹುನ್ನಾರದ ಬಗ್ಗೆ ತಿಳಿದುಕೊಂಡು, ನಿರಂತರವಾದ ಹೋರಾಟಕ್ಕೆ ಸಜ್ಜಾಗಲು ಕರೆ ನೀಡಿದರು. ಮಂಗಳೂರಿನ ದ.ಕ. ಜಿಲ್ಲೆ ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ್ ಸಹ ಮಾತನಾಡಿದರು.
ಸಭೆಯಲ್ಲಿ ಎಐಟಿಯುಸಿ ಹಿರಿಯ ಧುರೀಣ, ಅಖಿಲ ಭಾರತ ಬ್ಯಾಂಕ್ ನಿವೃತ್ತ ನೌಕರರ ಸಂಘದ ಪದಾಧಿಕಾರಿಯೂ ಆಗಿರುವ ಕೆ.ವಿ.ಭಟ್ ಇವರನ್ನು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಕಾರ್ಯಕರ್ತರಾದ ಶಶಿಕಲಾ ಗಿರೀಶ್ ಮತ್ತು ಸುಚಿತ್ರ ಇವರನ್ನು ಸಹ ಗೌರವಿಸಲಾಯಿತು.
ಎಐಟಿಯುಸಿ ನಾಯಕ ಬಿ. ಶೇಖರ ವರದಿ ಮತ್ತು ಬೇಡಿಕೆಗಳ ಕರಡು ನಿರ್ಣಯಗಳನ್ನು ಮಂಡಿಸಿದರು. ಗತವರ್ಷದ ಲೆಕ್ಕಪತ್ರಗಳನ್ನು ಕೆ.ವಿ.ಭಟ್ ಮಂಡಿಸಿದರು. ಕೆ.ವಿ. ಭಟ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.