ಉಪ್ಪಿನಂಗಡಿ: ಕಳವು ಪ್ರಕರಣ; ಸೊತ್ತು ಸಹಿತ ಮೂವರು ಸೆರೆ

Update: 2019-09-07 16:57 GMT

ಉಪ್ಪಿನಂಗಡಿ: ಇಲ್ಲಿನ ಆರ್.ಕೆ ಜ್ಯುವೆಲ್ಲರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ತಂಡ ಬಂಧಿಸಿದ್ದು, ಬಂಧಿತರಿಂದ ಸ್ವಲ್ಪ ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಈಚರ್ ಲಾರಿಯನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.   

ಗುಜರಾತ್‍ನ ದಾಹೋಡ್ ಜಿಲ್ಲೆಯವರಾದ ಭಗವಾನ್ ಸಿಂಗ್ ಯಾನೆ ಭಗವಾನ್ ಸಿಂಗ್ ರಮೇಶ್ ಭಾಯ್ ಸಿಸೋಡಿಯಾ (32), ಸುನೀಲ್ ಯಾನೆ ಸಂದೀಪ್ (27) ಹಾಗೂ ರಾಜಸ್ಥಾನದ ಬೂಂದಿ ಜಿಲ್ಲೆಯ ಜಮೀಲ್ ಯಾನೆ ಚಾಚಾ (60) ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಿಂದ 7,05,242 ಲಕ್ಷ ರೂ. ಮೌಲ್ಯದ 185.590 ಗ್ರಾಂ ತೂಕದ ಚಿನ್ನಾಭರಣ, 2,26,407 ರೂ. ಮೌಲ್ಯದ 3972.060 ಗ್ರಾಂ ಬೆಳ್ಳಿಯ ಆಭರಣ ಹಾಗೂ 23,00,000 ಲಕ್ಷ ರೂ. ಮೌಲ್ಯದ ಈಚರ್ ಲಾರಿ ಸೇರಿದಂತೆ ಒಟ್ಟು 32,31,649 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ

ಕಳೆದ ಆ.15ರಂದು ರಾತ್ರಿ ಇಲ್ಲಿನ ಆರ್.ಕೆ. ಜ್ಯುವೆಲ್ಲರಿಯ ಷಟರ್ ಅನ್ನು ಗ್ಯಾಸ್ ಕಟ್ಟರ್‍ನಿಂದ ತುಂಡರಿಸಿ ಒಳನುಗ್ಗಿದ ಕಳ್ಳರು ಕಪಾಟುಗಳಲ್ಲಿ ಇರಿಸಲಾಗಿದ್ದ ಸುಮಾರು 650.69 ಗ್ರಾಂ ಚಿನ್ನಾಭರಣ ಹಾಗೂ 7 ಕೆ.ಜಿ. ಬೆಳ್ಳಿಯ ಆಭರಣ ಸೇರಿದಂತೆ ಸುಮಾರು 27 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು  ಕಳವುಗೈದು ಪರಾರಿಯಾಗಿದ್ದರು.

ಆ.16ರಂದು ನಸುಕಿನ ಜಾವ ಈ ಘಟನೆ ಬೆಳಕಿಗೆ ಬಂದಿತ್ತು. ಇದರ ಪತ್ತೆಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮೂರು ತಂಡಗಳನ್ನು ರಚಿಸಿ, ತನಿಖೆಗೆ ಆದೇಶಿಸಿದ್ದರು. ಕಳ್ಳತನಕ್ಕೆ ಬಳಸಿದ ವಾಹನದ ಬಗ್ಗೆ ಸುಳಿವು ಪಡೆದ ತನಿಖಾ ತಂಡಗಳು ಗುಜರಾತ್‍ನ ದಾಹೋಡ್‍ನ ಕತ್ವಾರ ಎಂಬಲ್ಲಿ ಕೃತ್ಯಕ್ಕೆ ಬಳಸಿದ ಈಚರ್ ಲಾರಿಯನ್ನು ವಶಕ್ಕೆ ಪಡೆದಿದ್ದು, ಬಳಿಕ ಮೂವರು ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳೆಲ್ಲರೂ ತಾವು ಕಳವು ಮಾಡಿದ ಸೊತ್ತುಗಳನ್ನು ಪರಸ್ಪರ ಹಂಚಿಕೊಂಡಿದ್ದು, ಅದರಲ್ಲಿ ಮೂವರ ಬಳಿಯಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಭಗವಾನ್ ಸಿಂಗ್ ಎಂಬಾತ ಈಚರ್ ಲಾರಿಯ ಚಾಲಕನಾಗಿದ್ದು, ಈತ ಬೆಂಗಳೂರಿಗೆ ಬಾಡಿಗೆಗೆ ಬರುವಾಗ ಕರ್ನಾಟಕದಲ್ಲಿ ಚಿನ್ನಾಭರಣದ ಅಂಗಡಿಯಲ್ಲಿ ಕಳವು ಮಾಡುವ ಉದ್ದೇಶದಿಂದ  ಈಗಾಗಲೇ ಬಂಧಿತರಾಗಿರುವ ಸುನೀಲ್, ಜಮೀಲ್ ಹಾಗೂ  ರಾಜಸ್ಥಾನ  ಗುಜರಾತ್ ಇತರ ಐದು ಮಂದಿಯೊಂದಿಗೆ ಬಂದಿದ್ದ. ಹೀಗೆ ಉಪ್ಪಿನಂಗಡಿಗೆ ಬಂದಿದ್ದ ಇವರು ಆರ್.ಕೆ. ಜ್ಯುವೆಲ್ಲರಿಯಲ್ಲಿ ಕಳವು ಮಾಡಿ ಪರಾರಿಯಾಗಿದ್ದರು.

ಕುಖ್ಯಾತ ಕಳ್ಳರನ್ನು ಒಳಗೊಂಡ ತಂಡವಾಗಿದ್ದುಈ ತಂಡವು ಕುಖ್ಯಾತ ಕಳ್ಳರನ್ನೊಳಗೊಂಡ ತಂಡವಾಗಿದ್ದು, ಗುಜರಾತ್ ಹಾಗೂ ರಾಜಸ್ತಾನ ರಾಜ್ಯಗಳನ್ನು ಹೊರತು ಪಡಿಸಿ ಇತರೆ ರಾಜ್ಯಗಳಿಗೆ ಅಗತ್ಯ ಕೆಲಸಕ್ಕೆ ಹೋಗಿ ಅಲ್ಲಿಂದ ಹಿಂದಿರುಗುವ ಸಮಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾವಲುಗಾರರು, ಸಿಸಿ ಕ್ಯಾಮಾರ ಇಲ್ಲದ ಚಿನ್ನದ ಅಂಗಡಿಗಳನ್ನು ಹಗಲು ಸಮಯ ನೋಡಿ, ಬಳಿಕ ಕಳ್ಳತನಕ್ಕೆ ಹೊಂಚು ಹಾಕಿ ರಾತ್ರಿ ಸಮಯ ಕಳ್ಳತನ ಮಾಡಿ ಪರಾರಿಯಾಗುವ ತಂಡವಾಗಿದೆ. ಈ ಕಳ್ಳರ ವಾಸಸ್ಥಾನವಾಗಿರುವ ಗುಜರಾತ್‍ನ ರಲಿಯಾಟಿ ಹಾಗೂ ರಾಜಸ್ಥಾನದ ದಿವೋಲಿ ವಠಾರವು ಕುಖ್ಯಾತ ಕಳ್ಳರೇ ವಾಸ ಮಾಡಿಕೊಂಡಿರುವ ಗ್ರಾಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವಿಕ್ರಮ್ ಅಮಟೆಯವರ ಮಾರ್ಗದರ್ಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿಯವರ ನಿರ್ದೇಶನದಂತೆ ನಡೆದ ಈ ಪತ್ತೆಕಾರ್ಯದಲ್ಲಿ  ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ  ಹಾಗೂ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಸಿಬ್ಬಂದಿಗಳಾದ ಪುತ್ತೂರು ನಗರ ಠಾಣಾ ಎಎಸ್‍ಐ ಚಿದಾನಂದ ರೈ, ಡಿಸಿಐಬಿ ಘಟಕದ ಪ್ರವೀಣ್ ದೇವಾಡಿಗ, ಪ್ರವೀಣ್ ರೈ, ಉಪ್ಪಿನಂಗಡಿ ಠಾಣೆಯ ಹರೀಶ್ಚಂದ್ರ, ಇರ್ಷಾದ್, ಪುತ್ತೂರು ಸಂಚಾರ ಠಾಣೆಯ ಸ್ಕರಿಯ, ಬೆಳ್ತಂಗಡಿ ಸಂಚಾರ ಠಾಣೆಯ ಮನೋಹರ, ಪುತ್ತೂರು ಗ್ರಾಮಾಂತರ ಠಾಣೆಯ ಆದ್ರಾಂ, ವಿನಯ್, ಬಂಟ್ವಾಳ ಸಂಚಾರ ಠಾಣೆಯ ಪ್ರಶಾಂತ್ ರೈ, ವಿಟ್ಲ ಠಾಣೆಯ ಪ್ರಸನ್ನ, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಜಗದೀಶ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್‍ರವರು ಭಾಗಿಯಾಗಿದ್ದಾರೆ. ಇವರ ಈ ಕಾರ್ಯವನ್ನು ಎಸ್ಪಿಯವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News