ನಿರ್ಭೀತಿಯ, ಘನತೆಯ ಜೀವನಕ್ಕೆ ಸಂಘಟಿತರಾಗೋದು ಅಗತ್ಯ: ಎ.ಕೆ. ಅಶ್ರಫ್

Update: 2019-09-07 17:23 GMT

ಉಪ್ಪಿನಂಗಡಿ: ಕೋಮುವಾದಿ ಶಕ್ತಿಗಳು ಮುಸ್ಲಿಂ ಸಮುದಾಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಸವಾರಿ ಮಾಡುತ್ತಾ ನಮ್ಮನ್ನು ಧಮನಿಸುವ ಕೆಲಸ ಮಾಡುತ್ತಿದ್ದು, ಇದನ್ನು ದೃಢವಾಗಿ ಎದುರಿಸಿ ನಿರ್ಭೀತಿಯ, ಘನತೆಯ ಜೀವನ ನಡೆಸಲು ನಾವೆಲ್ಲಾ ಸಂಘಟಿರಾಗುವುದು ಅತೀ ಅಗತ್ಯ ಎಂದು ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಎ.ಕೆ. ಅಶ್ರಫ್ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಪ್ಪಿನಂಗಡಿ ವಲಯದ ವತಿಯಿಂದ `ನಿರ್ಭೀತಿಯಿಂದ ಘನತೆಯಿಂದ ಜೀವಿಸಿ' ಘೋಷಣೆ ಅಡಿಯಲ್ಲಿ ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಪಿಎಫ್‍ಐನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ನ ಗುಪ್ತ ಅಜೆಂಡಾ ಮತ್ತು ಬಿಜೆಪಿಯ ಬ್ರಾಹ್ಮಣ ಶಾಹಿ ಅಧಿಕಾರದಿಂದಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ದೇಶವನ್ನು ಒಡೆದು ಆಳುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಅಪಾಯದ ಅಂಚಿಗೆ ತಲುಪಿದೆ. ಈ ನಡುವೆ ಸುಳ್ಳು ಮಾತಿನ ಮೂಲಕ ಜನರನ್ನು ಮೋಡಿ ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದೇಶವು ಗಂಭೀರ ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವಾಗ  ಪುಲ್ವಾಮ ದಾಳಿಯಂತಹ ಘಟನೆಗಳನ್ನು ಸೃಷ್ಟಿಸಿ ಜನರ ಗಮನ ಬೇರೆಡೆ ಸೆಳೆಯುವಂತೆ ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದೇಶದಲ್ಲಿ ಮುಸ್ಲಿಂ ಸಮುದಾಯವು ನಿರಂತರ ಶೋಷಣೆ, ದಬ್ಬಾಳಿಕೆಗೆ ಒಳಗಾಗುತ್ತಿದ್ದು, ಇಂತಹ ಸಮಯದಲ್ಲಿ ಸಮುದಾಯಕ್ಕೆ ಸಹಾಯ ಮಾಡುವುದೇ ಪಿಎಫ್‍ಐ ಸಂಘಟನೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವುಗಳು ಸಂಘಟಿತರಾಗಿ ಹೋರಾಟ ನಡೆಸಲು ಸಿದ್ಧರಾಗಿರಬೇಕು ಎಂದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಉಪ್ಪಿನಂಗಡಿ ವಲಯ ಅಧ್ಯಕ್ಷ ಬಿ.ಕೆ. ಸುಲೈಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್‍ಡಿಪಿಐ ಉಪ್ಪಿನಂಗಡಿ ವಲಯ ಅಧ್ಯಕ್ಷ ಅಬ್ದುಲ್ ರಝಾಕ್ ಸೀಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಫ್ರೀಡಂ ಚಾರಿಟೇಬಲ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಅಗ್ನಾಡಿ, ಇಮಾಂ ಕೌನ್ಸಿಲ್ ಅಧ್ಯಕ್ಷ ಜಾಫರ್ ಸಾದಿಕ್ ಫೈಝಿ ಉಪಸ್ಥಿತರಿದ್ದರು.

ಪಿ.ಎಫ್.ಐ. ಸಂಘಟನೆಯ ಮುಸ್ತಫಾ ಪೆರ್ನೆ ಸ್ವಾಗತಿಸಿದರು. ಇಕ್ಬಾಲ್ ಕೆಂಪಿ ವಂದಿಸಿದರು. ಹಸನ್ ಸಜ್ಜಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News