ಯುಎಸ್ ಓಪನ್ ಪ್ರಶಸ್ತಿ ಗೆದ್ದ ಕೆನಡಾದ ಬಿಯಾಂಕಾ ಆ್ಯಂಡ್ರೀಸ್ಕು

Update: 2019-09-08 03:48 GMT

ನ್ಯೂಯಾರ್ಕ್: ಕೆನಡಾದ ಹದಿಹರೆಯದ ಬೆಡಗಿ ಬಿಯಾಂಕಾ ಆ್ಯಂಡ್ರೀಸ್ಕು, ಅನುಭವಿ ಆಟಗಾರ್ತಿ ಸೆರೇನಾ ವಿಲಿಯಮ್ಸ್‌ಗೆ ತವರಿನ ಅಂಕಣದಲ್ಲೇ ಸೋಲುಣಿಸಿ ಯುಎಸ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದಿದ್ದಾರೆ.

ದೊಡ್ಡ ಸರ್ವ್, ದೊಡ್ಡ ಹೊಡೆತದಂಥ ಸೆರೇನಾ ಅಸ್ತ್ರಗಳನ್ನೇ ಪ್ರತ್ಯಸ್ತ್ರವಾಗಿಸಿದ ಬಿಯಾಂಕಾ ಚೊಚ್ಚಲ ಗ್ರ್ಯಾಂಡ್‌ಸ್ಲಾಂಗೆ ಮುತ್ತಿಟ್ಟರು. ಈ ಮೂಲಕ ದಾಖಲೆ 24ನೇ ಗ್ರ್ಯಾಂಡ್‌ಸ್ಲಾಂ ಎತ್ತುವ ಸೆರೇನಾ ಕನಸು ನುಚ್ಚುನೂರಾಯಿತು.

ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ 19 ವರ್ಷ ವಯಸ್ಸಿನ ಬಿಯಾಂಕಾ ಮೊದಲ ಸೆಟ್‌ನಲ್ಲಿ ಎರಡು ಬಾರಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿ 6-3 ಅಂತರದಲ್ಲಿ ನಿರಾಯಾಸವಾಗಿ ಗೆದ್ದರು. ಎರಡನೇ ಸೆಟ್‌ನಲ್ಲಿ ಸೆರೇನಾ ತಮ್ಮ ಎಲ್ಲ ಅನುಭವ ಪಣಕ್ಕಿಟ್ಟು ಹೋರಾಡಿದರೂ ಅಂತಿಮವಾಗಿ 7-5 ಅಂತರದಲ್ಲಿ ಶರಣಾದರು.

"ಟೆನಿಸ್‌ನ ದಂತಕಥೆ ಎನಿಸಿದ ಸೆರೇನಾ ವಿರುದ್ಧ ಈ ಅಂಕಣದಲ್ಲಿ ಆಡಲು ಅವಕಾಶ ಸಿಕ್ಕಿದ್ದೇ ಅದ್ಭುತ" ಎಂದು ದೊಡ್ಡ ಕೂಟದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಬಿಯಾಂಕಾ ಪ್ರತಿಕ್ರಿಯಿಸಿದ್ದಾರೆ.

ಫ್ಲಶಿಂಗ್ ಮೆಡೋಸ್‌ನಲ್ಲಿ ಸೆರೇನಾ ಫೈನಲ್ ಸೋಲುತ್ತಿರುವುದು ಇದು ಸತತ ಎರಡನೇ ಬಾರಿ. ಆದರೆ 2018ರಲ್ಲಿ ನವೋಮಿ ಒಸಾಕ ವಿರುದ್ಧದ ಪಂದ್ಯದಲ್ಲಿ ಸೋತಂತೆ ಈ ಬಾರಿ ಯಾವ ವಿವಾದ ಅಥವಾ ವಾಗ್ವಾದ ಇಲ್ಲದೇ ಸೆರೇನಾ ಸೋಲೊಪ್ಪಿಕೊಂಡರು.

ತಾಯಿಯಾದ ಬಳಿಕ ಕಳೆದ ಎರಡು ವರ್ಷದಲ್ಲಿ ಸೆರೇನಾ ಏಳು ಪ್ರಮುಖ ಫೈನಲ್‌ಗಳ ಪೈಕಿ 3ನ್ನು ಸೋತಿದ್ದಾರೆ. ಮಾರ್ಗರೇಟ್ ಕೋರ್ಟ್ ಅವರ ಅಧಿಕ ಪ್ರಶಸ್ತಿಯ ದಾಖಲೆ ಮುಟ್ಟಲು ಸೆರೇನಾಗೆ ಒಂದು ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಬೇಕಿದೆ. ಬಿಯಾಂಕಾ ಪ್ರಮುಖ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಕೆನಡಿಯನ್ ಮಹಿಳೆ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News