ಜನಪರ ಜಿಲ್ಲಾಧಿಕಾರಿಗೆ ದೇಶದ್ರೋಹಿ ಪಟ್ಟ: ರಮಾನಾಥ ರೈ

Update: 2019-09-08 07:11 GMT

ಮಂಗಳೂರು, ಸೆ. 8: ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರ ಸ್ತಂಭ ಕುಸಿಯುತ್ತಿದೆ. ಸೈದ್ಧಾಂತಿಕ ನಿಲುವುಗಳು ಅಧಿಕಾರದಲ್ಲಿರಲು ಬಿಡುತ್ತಿಲ್ಲವೆಂದು ತನ್ನ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಜನಪರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಇದೀಗ ದೇಶದ್ರೋಹಿ ಪಟ್ಟ ಕಟ್ಟುವ ಹುನ್ನಾರ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ತಮಾನ ದಿನಗಳಲ್ಲಿ ಕೇಂದ್ರ ಸರಕಾರದ ಆಡಳಿತದ ನಡೆಯಿಂದ ಪ್ರಜಾಪ್ರಭುತ್ವ ಪಾತಾಳಕ್ಕೆ ಕುಸಿದಿದೆ. ದೇಶವು ಭವಿಷ್ಯತ್‌ನಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕೇವಲ ಧರ್ಮ, ದೇವರು, ದೇಶಪ್ರೇಮದ ಹೆಸರಲ್ಲಿ ದೇಶದ ಜನತೆಗೆ ಮೋಸ ಮಾಡುತ್ತಿದೆ. ಬಿಜೆಪಿಯವರ ಪ್ರಕಾರ, ಕೇಂದ್ರ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ ಕೊಟ್ಟಿದ್ದರೆ ಮಾತ್ರ ಅವರು ಮಾದರಿ ಜಿಲ್ಲಾಧಿಕಾರಿಯಾಗುತ್ತಿದ್ದರು. ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಮೇಲೆ ಅವರು ದೇಶದ್ರೋಹಿಯಾಗುತ್ತಿದ್ದಾರೆ. ಇಲ್ಲಿಯವರೆಗೆ ಡಿಸಿ ಬಗ್ಗೆ ಸೊಲ್ಲೆತ್ತದ ಯಾರೂ ಇಂದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರವಧಿಯಲ್ಲಿದ್ದಾಗ ಯಾವುದೇ ಆರೋಪಗಳು ಕೇಳಿ ಬರಲಿಲ್ಲ. ಕೇಂದ್ರ ಸರಕಾರದ ಆಡಳಿತದ ಬಗ್ಗೆ ಮಾತನಾಡಿದ ಕೂಡಲೇ ಅವರು ಅಕ್ರಮ ನಡೆಸಿದ್ದಾರೆನ್ನುವ ಆರೋಪಗಳು ಕೇವಲ ಊಹಾಪೋಹಗಳಾಗಿವೆ. ಜಿಲ್ಲಾಧಿಕಾರಿಯು ‘ಸ್ಯಾಂಡ್ ಬಝಾರ್’ ಆ್ಯಪ್‌ಗೆ ಚಾಲನೆ ನೀಡಿದ ಬಳಿಕ ಅಕ್ರಮ ಮರಳುಗಾರಿಕೆಗೆ ಪೂರ್ಣ ವಿರಾಮ ಬಿದ್ದಿತ್ತು. ಅಕ್ರಮ ನಡೆಸಲು ಅವಕಾಶ ಕಲ್ಪಿಸಲು ಸಾಧ್ಯವಾದ ಹಿನ್ನೆಲೆಯಲ್ಲಿ ಇಂದು ಅವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅವೆಲ್ಲವೂ ನಿರಾಧಾರ ಎಂದು ರಮಾನಾಥ ರೈ ಪುನರುಚ್ಚರಿಸಿದರು.

ದ.ಕ. ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ ಬಂದಾಗ ಸಸಿಕಾಂತ್ ಸೆಂಥಿಲ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯು ವಿಪರೀತ ಮಳೆಯಿಂದಾಗಿ ಪ್ರಾಕೃತಿಕ ಹಾನಿಗೊಳಗಾಗಿತ್ತು. ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ ತಾಂಡವವಾಡುತ್ತಿತ್ತು. ಆಗ ಅದನ್ನು ನಿಯಂತ್ರಣಕ್ಕೆ ತಂದಿದ್ದು ಇದೇ ಜಿಲ್ಲಾಧಿಕಾರಿ. ಭಾರೀ ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುತ್ತಿದ್ದುದು, ಅವರಿಗೆ ಮಕ್ಕಳ ಬಗ್ಗೆ ಇದ್ದ ಕಾಳಜಿಯನ್ನು ತೋರಿಸುತ್ತಿತ್ತು ಎಂದರು.

ಕರಾವಳಿಯ ಕಾರ್ತಿಕ್ ರಾಜ್, ಹರೀಶ್ ಪೂಜಾರಿ ಹತ್ಯೆಯಾದಾಗ ಬಿಜೆಪಿ ಹಾಗೂ ಸಂಘಪರಿವಾರದವರು ಜಿಲ್ಲೆಗೆ ಬೆಂಕಿ ಹಚ್ಚುವಂತಹ, ಸಾಮರಸ್ಯಕ್ಕೆ ಧಕ್ಕೆಯಾಗುವ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದರು. ಹತ್ಯೆಯಲ್ಲಿ ಅರರದ್ದೇ ಸಂಘಪರಿವಾರದವರ ಕೈವಾಡ ಇದೆ ಎಂದ ತಕ್ಷಣ ಮೌನವಾಗಿ ಬಿಡುತ್ತಿದ್ದರು. ಬಿಜೆಪಿ ಹಾಗೂ ಸಂಘಪರಿವಾರದವರು ಮಾತ್ರ ಕೀಳುಮಟ್ಟದ ರಾಜಕೀಯ ನಡೆಸುತ್ತಾರೆ ಎಂದು ರಮಾನಾಥ ರೈ ವಾಗ್ದಾಳಿ ನಡೆಸಿದರು.

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಂಡರಿಯದ ಪ್ರವಾಹ ಬಂದಾಗ ದೇಶದ ಪ್ರಧಾನಿ ಎನಿಸಿಕೊಂಡವರು ವಿದೇಶ ಸುತ್ತುತ್ತಿದ್ದಾರೆ. ಹಾನಿಯಾದ ಪ್ರದೇಶಕ್ಕೆ ವೈಮಾನಿಕ ಭೇಟಿ ನೀಡಿಲ್ಲ, ಪರಿಹಾರ ಘೋಷಿಸುವ ಹೇಳಿಕೆಯನ್ನೂ ನೀಡಿಲ್ಲ. ಅವರಿಗೆ ದೇಶದ ಜನತೆಯ ಕಷ್ಟಗಳನ್ನು ವಿಚಾರಿಸುವ ಆಸಕ್ತಿ ಇಲ್ಲ, ಕೇವಲ ಚುನಾವಣೆಗಳನ್ನು ಗೆಲ್ಲುವುದೇ ಗುರಿಯಾಗಿದೆ ಎಂದು ಛೇಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಶಶಿಧರ್ ಹೆಗ್ಡೆ, ಆರ್.ಕೆ. ಪೃಥ್ವಿರಾಜ್, ವಿಶ್ವಾಸ್‌ ಕುಮಾರ್ ದಾಸ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಕವಿತಾ ಸನಿಲ್, ಗಣೇಶ್ ಪೂಜಾರಿ, ಬಿ.ಎಂ. ಅಬ್ಬಾಸ್ ಅಲಿ, ನೀರಜ್ ಪಾಲ್, ಜಯಶೀಲಾ ಅಡ್ಯಂತಾಯ, ಸಿ.ಎಂ. ಮುಸ್ತಫ, ಪ್ರೇಮ್‌ನಾಥ್ ಬಳ್ಳಾಲ್‌ ಭಾಗ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News