ಕಯ್ಯಾರು ಇಗರ್ಜಿಯಲ್ಲಿ 'ಮೊಂತಿ ಫೆಸ್ತ್’ ಸಂಭ್ರಮ

Update: 2019-09-08 08:17 GMT

ಕಾಸರಗೋಡು : ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮದಿನವಾದ ಸೆ. 8 ರಂದು  ಕರಾವಳಿ ಕೊಂಕಣಿ ಕೆಥೊಲಿಕರು ಮೊಂತಿ ಫೆಸ್ತ್ (ತೆನೆ ಹಬ್ಬ) ವನ್ನು ಧಾರ್ಮಿಕ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. 

ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ  ನಡೆದ  ವಿಶೇಷ  ಪ್ರಾರ್ಥನೆ  ಹಾಗೂ   ಬಲಿ ಪೂಜೆ ನೆರವೇರಿತು .  ಕಯ್ಯಾರ್  ಕ್ರಿಸ್ತರಾಜ ಇಗರ್ಜಿಯ ಧರ್ಮಗುರು  ಫಾ.  ಐವನ್ ಡಿ ಮೆಲ್ಲೊ  ಬಲಿ ಪೂಜೆ ಯನ್ನು ನೆರವೇರಿಸಿದರು.

ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನದ ದಿನ, ಹೊಸ ಬೆಳೆಯ ಹಬ್ಬವಾಗಿ ಆಚರಿಸಲಾಗುತ್ತಿದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕರಾವಳಿಯಲ್ಲಿ ಪ್ರಕೃತಿ ಮಾತೆಯನ್ನು ವಿಶಿಷ್ಟ ರೀತಿಯಲ್ಲಿ ವಂದಿಸಲಾಗುತ್ತದೆ. ಕೊಂಕಣಿ ಕೆಥೋಲಿಕರು ಇದನ್ನು “ಮೊಂತಿ ಫೆಸ್ತ್’ ಆಗಿ ಆಚರಿಸುತ್ತಾರೆ.

ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‌ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆಯ ಕಾರ್ಯಕ್ರಮ ಆ. 30 ರಂದು ಆರಂಭವಾಗಿದೆ. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತ್ತಾರೆ.

ಚರ್ಚ್‌ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ವಿಶೇಷತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News