ಮಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ರಾಜ್ಯ ಸಮ್ಮೇಳನಕ್ಕೆ ಚಾಲನೆ

Update: 2019-09-08 08:57 GMT

ಮಂಗಳೂರು, ಸೆ.8: ಕರ್ನಾಟಕ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಜಿಐಒ)ನಿಂದ ‘ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ’ ಘೋಷವಾಕ್ಯದಡಿ ಮಂಗಳೂರು ನಗರದ ಪುರಭವನದಲ್ಲಿ ರವಿವಾರ ಬೆಳಗ್ಗೆ ನಡೆದ ಜಿಐಒ ರಾಜ್ಯ ಸಮ್ಮೇಳನಕ್ಕೆ ಜಮಾಅತೆ ಇಸ್ಲಾಮಿ ಹಿಂದ್‌ನ (ಜೆಐಎಚ್) ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಅಮಿನುಲ್ ಹಸನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಮಿನುಲ್ ಹಸನ್, ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಎಲ್ಲೆಡೆ ಮಾನವ ಹಕ್ಕುಗಳ ಉಲ್ಲಂಘನೆ, ವ್ಯಕ್ತಿಗಳ ಮೇಲೆ ಸಾಮೂಹಿಕ ಥಳಿತ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಾನವನ ಘನತೆ ಕುಸಿಯುತ್ತಿದೆ. ದೇಶದಲ್ಲಿ ಅಸಮಾನತೆ ಹೆಚ್ಚಳವಾಗು ತ್ತಿದ್ದು, ವಿಚಾರಗಳ ಮರುಚಿಂತನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ‘ಬೇಟಿ ಪಡಾವೊ, ಬೇಟಿ ಬಚಾವೊ’ ಕೇವಲ ಘೋಷಣೆಯಾಗಿ ಉಳಿದಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಬಾಲಕಿಯರು ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರರಣಗಳ ಸಂಖ್ಯೆ ಏರುಗತಿಯಲ್ಲಿದೆ. ಕೇಂದ್ರ ಸರಕಾರದ ಯೋಜನೆಗಳು ಕೇವಲ ಘೋಷಣೆಯಾಗಿ ಬಾಕಿ ಉಳಿಯದೇ ಕಾರ್ಯ ರೂಪಕ್ಕೆ ಬರಬೇಕು ಎಂದು ಅವರು ಆಗ್ರಹಿಸಿದರು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ರಾಜ್ಯಾಧ್ಯಕ್ಷೆ ಉಮೈರಾ ಬಾನು ಧ್ವಜಾರೋಹಣ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಸಹ ಕಾರ್ಯದರ್ಶಿ ರಹ್ಮತುನ್ನೀಸಾ ಸಾಹೇಬ, ನಬೀಲಾ ಅಲ್ಮಾಸ್ ಮುಲ್ಲಾ, ರುಕ್ಸಾನಾ ಉಮರ್, ಸಬಿಹಾ ಸುಲ್ತಾನ, ಖಮರುನ್ನೀಸಾ, ನವಿದಾ ಅಸದಿ, ಜೆಐಎಚ್‌ನ ಮಹಿಳಾ ವಿಭಾಗದ ಸಹಾಯಕ ಕಾರ್ಯದರ್ಶಿ ತಶ್ಕಿಲಾ ಖನಂ ಸಾಹೇಬ, ಸಾಜಿದುನ್ನೀಸಾ ಲಲ್ಮಿಯಾ ಸಾಹೇಬ, ಅಫೀದಾ ಅಹ್ಮದ್, ಬುಶ್ರಾ ಈನಸ್ ಮಾತನಾಡಿದರು.

ಸಮಾರಂಭದಲ್ಲಿ ಆಯೇಶಾ ಆಫ್ರೀನ್ ಕಿರಾಅತ್ ಪಠಿಸಿದರು. ಜಿಐಒ ಪ್ರಧಾನ ಕಾರ್ಯದರ್ಶಿ ಮುಹಿ ನಿಶಾತ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News