ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 371ನೇ ವಿಧಿಯನ್ನು ಮುಟ್ಟುವುದಿಲ್ಲ: ಅಮಿತ್ ಶಾ

Update: 2019-09-08 14:12 GMT

ಗುವಾಹಟಿ,ಸೆ.8: ಕೇಂದ್ರ ಸರಕಾರವು ಈಶಾನ್ಯ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿರುವ ಸಂವಿಧಾನದ 371ನೇ ವಿಧಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರವಿವಾರ ಇಲ್ಲಿ ತಿಳಿಸಿದರು.

ಈಶಾನ್ಯ ಮಂಡಳಿಯ 68ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಶಾ,ಜಮ್ಮು-ಕಾಶ್ಮೀರದಲ್ಲಿ ವಿಧಿ 370ರ ರದ್ದತಿಯ ಬಳಿಕ ಕೇಂದ್ರವು ವಿಧಿ 371ನ್ನೂ ರದ್ದುಗೊಳಿಸಲಿದೆ ಎಂದು ಈಶಾನ್ಯ ರಾಜ್ಯಗಳ ಜನರಿಗೆ ತಪ್ಪು ಮಾಹಿತಿಗಳನ್ನು ನೀಡುವ ಮತ್ತು ತಪ್ಪುಮಾರ್ಗಕ್ಕೆಳೆಯುವ ಪ್ರಯತ್ನಗಳು ನಡೆದಿದ್ದವು. ಕೇಂದ್ರವು ವಿಧಿ 371ನ್ನು ಮುಟ್ಟುವುದಿಲ್ಲ ಎಂದು ತಾನೀಗಾಗಲೇ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದೇನೆ ಮತ್ತು ಇಂದು ಈಶಾನ್ಯದ ಎಂಟು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಮತ್ತೆ ಅದೇ ಮಾತನ್ನು ಹೇಳುತ್ತಿದ್ದೇನೆ ಎಂದರು.

 ವಿಧಿ 370 ತಾತ್ಕಾಲಿಕ ಸ್ವರೂಪದ್ದಾಗಿತ್ತು ಮತ್ತು ಇವೆರಡೂ ವಿಧಿಗಳ ನಡುವೆ ಅಗಾಧ ವ್ಯತ್ಯಾಸವಿದೆ. ತಮ್ಮ ಬುಡಕಟ್ಟು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲು ಹೆಚ್ಚಿನ ಈಶಾನ್ಯ ರಾಜ್ಯಗಳಿಗೆ ವಿಧಿ 371ರಡಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ವಿಧಿ 371ಬಿ ಅಸ್ಸಾಮಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ ಎಂದು ಶಾ ತಿಳಿಸಿದರು.

 ಆ.31ರಂದು ಅಸ್ಸಾಂ ಎನ್‌ಆರ್‌ಸಿ ಪ್ರಕಟಗೊಂಡ ಬಳಿಕ ಇದು ರಾಜ್ಯಕ್ಕೆ ಶಾ ಅವರ ಮೊದಲ ಭೇಟಿಯಾಗಿದೆ. ಅಸ್ಸಾಮಿನಲ್ಲಿ ತನ್ನ ಎರಡು ದಿನಗಳ ವಾಸ್ತವ್ಯದ ಅವಧಿಯಲ್ಲಿ ರಾಜ್ಯದಲ್ಲಿಯ ಸ್ಥಿತಿಯನ್ನು ಅವರು ಪುನರ್‌ಪರಿಶೀಲಿಸುವ ಸಾಧ್ಯತೆಯಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News