ಮಡಿ ಮೈಲಿಗೆ ನಿಸರ್ಗಕ್ಕೆ ಮಾಡಿದ ಅಪಚಾರ: ಲಕ್ಷ್ಮೀಶ ತೋಳ್ಪಾಡಿ
ಉಡುಪಿ, ಸೆ. 8: ಹಕ್ಕಿಯ ಆರ್ಥನಾದ ಕೇಳಿ ರಾಮಾಯಣ ಹುಟ್ಟಿತು. ಮಡಿ ಕೆಡುವುದಾದರೆ ಆಗಲೇ ಕೆಡಲಿಲ್ಲವೇ ?. ಮಡಿ ಮೈಲಿಗೆಯನ್ನು ಒಪ್ಪುವುದಾದರೆ ನಾವು ಹಕ್ಕಿಯ ಆರ್ಥನಾದಕ್ಕೆ ಕೃತಜ್ಞತರಾಗಿರಬೇಕು. ಹಕ್ಕಿಯ ಆರ್ಥನಾದದಷ್ಟು ಅಪ್ಪಟವಾದ ಯಾವುದೇ ಶ್ಲೋಕ ಇರಲು ಸಾಧ್ಯವಿಲ್ಲ. ನಿಸರ್ಗ ಸಹಜವಾದ ಸಂಗತಿಯನ್ನು ಮಡಿ ಮೈಲಿಗೆಯ ಕಣ್ಣಿನಲ್ಲಿ ನೋಡುವುದು ನಿಸರ್ಗಕ್ಕೆ ಮಾಡಿದ ಅಪಚಾರ ಎಂದು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಉಡುಪಿಯ ರಂಜನಿ ಸ್ಮಾರಕ ಟ್ರಸ್ಟ್ ಹಾಗೂ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ರಂಜನಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಅತ್ಯಂತ ಶ್ರೇಷ್ಠ ಕಲೆಯಾಗಿರುವ ಸಂಗೀತಕ್ಕೆ ಮಾತಿನಂತೆ ತರ್ಕದ ಬಂಧನ ಇಲ್ಲ. ಕಲೆ ಎಂಬುದು ಇನ್ನೊಬ್ಬರನ್ನು ರಂಜಿಸುವುದಕ್ಕಿಂತ ಮುಖ್ಯವಾಗಿ ತೋಡಿ ಕೊಳ್ಳುವಿಕೆಯ ವಿದ್ಯಮಾನವಾಗಿದೆ. ತೋಡಿಕೊಳ್ಳುವ ಭಾವ ಉಂಟಾಗದಿದ್ದರೆ ಹಾಡುಗಾರಿಕೆ ಬಹಳ ಶಾಸ್ತ್ರಿೀಯವಾಗಿ ಉಳಿಯಲು ಸಾಧ್ಯವಿಲ್ಲ ಎಂದರು.
ಸಂಗೀತದ ಮೂಲಕ ಹೃದಯವನ್ನು ತಲುಪಲು ಸಾಧ್ಯ. ಆದರೆ ಮಾತಿಗೆ ಆ ಸಾಮರ್ಥ್ಯ ಇಲ್ಲ. ನಮ್ಮಳಗಿನ ಐಕ್ಯ ಉದ್ದೀಪನ ಆಗದಿದ್ದರೆ ಹಾಡುವುದು ವ್ಯರ್ಥ. ನಿಜವಾದ ಮಾತು ಮಾತ್ರ ಇತರಿಗೆ ಮುಟ್ಟುತ್ತದೆ. ನಾವು ನಮಗೋಸ್ಕರ ಹಾಡಬೇಕು. ಆಗ ಮಾತ್ರ ಇನ್ನೊಬ್ಬರ ಹೃದಯವನ್ನು ಮುಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮೊತ್ತ ಮೊದಲ ಬಾರಿಗೆ ಒಂದು ಮಾತು ಅಥವಾ ಸ್ವರವನ್ನು ಆಲಿಸುವಾಗ ಉಂಟಾಗುವ ಭಾವದ ಮರುಕಳುಹಿಸುವಿಕೆಯೇ ಮನಸ್ಸು ಕರಗುವ ಪ್ರಕ್ರಿಯೆ. ಇದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಆಗುವ ಸಹಜ ಪರಿಕಲ್ಪನೆ ಆಗಿದೆ ಎಂದ ಅವರು, ತೋಡಿಕೊಳ್ಳುವಿಕೆ ಎಂಬುದು ಕಲೆಗೆ ಸಂಬಂಧಿಸಿದ ಪ್ರಾಚೀನ ಸಂಗತಿ. ಸೌಂದರ್ಯದಲ್ಲಿ ಕಲೆಯ ಪರಿಣಾಮ ಬಹಳ ಮುಖ್ಯ ಎಂದರು.
ಮನಸ್ಸು ಕಂಪಿಸದೆ ಯಾವ ಸೌಂದರ್ಯವೂ ಇಲ್ಲ. ಮನಸ್ಸು ಕಂಪನಗೊಂಡು ಕರಗುವ ಸಂದರ್ಭದಲ್ಲಿ ಸಿಗುವ ಚೆಲುವು ಅದ್ಭುತವಾಗಿದ್ದು, ಅದನ್ನು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಮನಸ್ಸು ಕರಗುವಾಗ ಸಿಗುವ ಸಂತೋಷ ನಮ್ಮದೇ ಆಗಿದ್ದು, ಅದನ್ನು ಯಾರು ಕಿತ್ತುಕೊಳ್ಳಲು ಆಗಲ್ಲ ಎಂದು ಲಕ್ಷ್ಮೀಶ ತೋಳ್ಪಾಡಿ ಹೇಳಿದರು.