ಮಂಗಳೂರು: ಮುಟ್ಟುಗೋಲು ಹಾಕಿಕೊಂಡ ಮರಳು ವಿತರಣೆಯಲ್ಲಿ ಅವ್ಯವಹಾರ ಆರೋಪ; ತನಿಖೆಗೆ ಆಗ್ರಹ
ಮಂಗಳೂರು, ಸೆ. 8: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತಡೆ ಹೆಸರಿನಲ್ಲಿ ದಾಸ್ತಾನು ಮಾಡಲಾದ ಮರಳನ್ನು ವಿತರಣೆ ಮಾಡುವಲ್ಲಿ ಅವ್ಯವಹಾರ ನಡೆದಿದೆ, ಈ ಬಗ್ಗೆ ತನಿಖೆಯಾಗಬೇಕು. ಇದರಿಂದ ಜನಸಾಮಾನ್ಯರು, ಲಾರಿ ಮಾಲಕರು ಮತ್ತು ಮರಳು ಉದ್ಯಮದಲ್ಲಿ ತೊಡಗಿರುವವರು ತೊಂದರೆಗೊಳಗಾಗಿದ್ದಾರೆ ಎಂದು ಎನ್. ಜೈರಾಜ್ ಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲಾರಿ ಮಾಲಕರ ಸಂಘಗಳ ಒಕ್ಕೂಟ ಮತ್ತು ಮರಳು ಗುತ್ತಿಗೆದಾರರು, ಹೊಗೈ ದೋಣಿ ಮಾಲಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲಕರ ಜಂಟಿ ಕ್ರೀಯಾ ಸಮಿತಿಯ ಅಧ್ಯಕ್ಷ ಎನ್. ಜೈರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬೇರೆ ಬೇರೆ ಕಡೆ ದಾಸ್ತಾನು ಮಾಡಿದ ಮರಳನ್ನು ಸಾವಿರಾರು ಲಾರಿಗಳಷ್ಟು ವಶಪಡಿಸಿಕೊಂಡು ಮರಳು ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಇದರಲ್ಲಿ ರಾಜಕಾರಣಿಗಳು, ಜಿಲ್ಲಾಡಳಿತದ ವರಿಷ್ಠಾಧಿಕಾರಿಗಳು ಶಾಮೀಲಾಗಿರುವ ಗುಮಾನಿ ಇದೆ. ಈ ಬಗ್ಗೆ ಲೋಕಾಯುಕ್ತ ಮತ್ತು ಸಂಬಂಧ ಪಟ್ಟ ಪ್ರಾಧಿಕಾರದ ಮುಂದೆ ದೂರು ದಾಖಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿಆರ್‌ಝಡ್ ವಲಯದಲ್ಲಿ ತಾತ್ಕಾಲಿಕ ಮರಳು ದಿಬ್ಬವನ್ನು ತೆರವುಗೊಳಿಸಲು ಪರವಾನಿಗೆ ನೀಡುವ ಸಂದರ್ಭ 2011-12ನೆ ಸಾಲಿನಲ್ಲಿ ಹಾಗೂ ಅದಕ್ಕೂ ಮೊದಲು ಕನಿಷ್ಠ ಮೂರು ವರ್ಷಗಳ ಕಾಲ ಮರಳು ತೆಗೆಯುವಲ್ಲಿ ಸಕ್ರಿಯವಾಗಿದ್ದವರನ್ನು ಸಾಂಪ್ರದಾಯಿಕ ಕರಾವಳಿ ಸಮುದಾಯ ಎಂದು ಪರಿಗಣಿಸಿ ಪರವಾನಿಗೆ ನೀಡುವಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮರಳು ಸಮಿತಿ ವಿಫಲವಾಗಿತ್ತು ಮತ್ತು ಅರ್ಹತೆ ಇರುವವರನ್ನು ಕಡೆಗಣಿಸಲಾಗಿದೆ. ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ಯಲ್ಲಿ ಒಂದೇ ಕುಟುಂಬದ 2-3 ಸದಸ್ಯರಿಗೆ ಟಿ.ಪಿ ವಿತರಿಸಲಾಗಿದೆ. ಉಚ್ಛನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ. ಮರವೂರು ಡ್ಯಾಮ್‌ನಿಂದ ಮಳವೂರಿನವರೆಗಿನ ನದಿ ಭಾಗದಲ್ಲಿ ಮರಳುಗಾರಿಕೆ ಸ್ಥಗಿತದಿಂದಾಗಿ ಮರಳು ಗಾರಿಕೆಯ ವೃತ್ತಿಯಲ್ಲಿ ತೊಡಗಿರುವವರಿಗೆ ತೊಂದರಯಾಗಿದೆ. ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಹೊಳೆತ್ತಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಮೆಟ್ರಿಕ್ ಟನ್ ಮರಳನ್ನು ತ್ವರಿತವಾಗಿ ವಿಲೇವಾರಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ತನಿಖೆ ಮಾಡುವಲ್ಲಿ ವಿಫಲರಾಗಿದ್ದಾರೆ. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಕೆಗೆ ಪಾರದರ್ಶಕವಾದ ರೀತಿಯ ಟೆಂಡರ್ ನಡೆದಿಲ್ಲಾ. ದ.ಕ ಜಿಲ್ಲೆಯಲ್ಲಿ ಮರಳು ಸರಬರಾಜು ಮತ್ತು ವಿತರಣೆಗೆ ಆ್ಯಪ್ ಅಳವಡಿಸಲಾಗಿದ್ದರೂ ಮರಳಿನ ಅಭಾವ ಸೃಷ್ಟಿಯಾಗಿದೆ. ಆದರೆ ಈ ಆ್ಯಪ್ ನಿರ್ವಹಣೆಯಲ್ಲೂ ಸಾಕಷ್ಟು ಲೋಪಗಳಿವೆ ಈ ಬಗ್ಗೆಯೂ ತನಿಖೆಯಾಗಬೇಕು. ಪಣಂಬೂರು ಎಸಿಪಿಯವರ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಸಮರ್ಪಕವಾದ ರೀತಿಯ ಕಡಿವಾಣ ಹಾಕಲಾಗಿದೆ. ಅಲ್ಲಿ ಪರವಾನಿಗೆ ಇರುವವರಿಗೆ ಮರಳುಗಾರಿಕೆ ನಡೆಸಲು ಸಮಸ್ಯೆಯಾಗುತ್ತಿಲ್ಲ. ಉಳಿದ ಕಡೆ ಮರಳು ಗಾರಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಮರಳು ವಿತರಣೆಯ ಸಮಸ್ಯೆಯನ್ನು ಸರಿಪಡಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೈರಾಜ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸುರೇಂದ್ರ ಕಂಬಳಿ, ಪಿ. ಗೋಪಾಲಕೃಷ್ಣ ಭಟ್, ಹಲ್ಯಾರ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ಗಳಾದ ಸುನೀಲ್ ಫೆರ್ನಾಂಡಿಸ್, ಯುಸೂಫ್ ಉಳಾಯಿ ಬೆಟ್ಟು, ಸಲಹೆಗಾರ ಬಿ.ಎಸ್.ಚಂದ್ರು ಮೊದಲಾದವರು ಉಪಸ್ಥಿತರಿದ್ದರು.