×
Ad

ದಲಿತ ಸಂಘಟನೆಗಳ ಒಗ್ಗಟ್ಟಿನ ಕೊರತೆಯಿಂದ ಶೋಷಣೆ ಹೆಚ್ಚಳ: ಜಯನ್ ಮಲ್ಪೆ

Update: 2019-09-08 19:43 IST

ಉಡುಪಿ, ಸೆ.8: ರಾಜ್ಯದ ಪ್ರಬಲ ಸಂಘಟನೆಯಾಗಿ ಬೆಳೆದಿದ್ದ ದಲಿತ ಸಂಘಟನೆ ಈಗ ತನ್ನ ಹಿಂದಿನ ಶಕ್ತಿ, ಬಲ, ಒಗ್ಗಟ್ಟು, ಎದೆಗಾರಿಕೆಯನ್ನು ಕಳೆದು ಕೊಂಡು ಸ್ವಸಹಾಯ ಗುಂಪುಗಳಾಗುತ್ತಿರುವುದು ವಿಷಾದನೀಯ ಎಂದು ದಲಿತ ಚಿಂತಕ ಹಾಗೂ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹೆಗ್ಗುಂಜೆ ಗ್ರಾಪಂ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ದಲಿತ ಜನಜಾಗೃತಿ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈಗ ದಲಿತ ಚಳುವಳಿ ಒಂದು ನೆನಪು ಮಾತ್ರ. ನಾಯಕರ ತೀರ್ಮಾನ ಗಳು, ಸ್ವಾರ್ಥ, ರಾಜಕೀಯ ಪ್ರಜ್ಞೆಯ ಕೊರತೆಯಿಂದ ಇಂದು ನೂರಾರು ಗುಂಪುಗಳಾಗಿ ಚದುರಿಹೊಗಿವೆ. ಹೀಗೆ ಸಂಘಟನೆ ಚೂರು ಚೂರು ಒಡೆದು ಹೋಗಿರುವ ಪರಿಣಾಮ ಶೋಷಣೆ ಮಾಡಲು ದಾರಿ ಸಿಕ್ಕಿದಂತಾಗಿದೆ ಎಂದು ಅವರು ದೂರಿದರು.

ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಹಾಗೂ ವಕೀಲ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಬ್ರಿಟಿಸರ ಆಡಳಿತದಿಂದ ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿದೆಯೇ ಹೊರತು ಭಾರತ ವಿಶ್ವಗುರು ಎನ್ನುವವರಿಂದಲ್ಲ. ಇವರು ಎಂದಿಗೂ ಇಲ್ಲಿನ ಜಾತಿಪದ್ಧತಿ, ಮೌಢ್ಯದ ಬಗ್ಗೆ ಮಾತನಾಡುತಿಲ್ಲ. ಇತಿಹಾಸ ತಿಳಿಯದವರು ಇತಿಹಾಸ ಸೃಟಿಸಲು ಅಸಾಧ್ಯ. ಹಾಗಾಗಿ ದಲಿತರು ಮೊದಲು ನಾವೇನಾಗಿದ್ದೇವೆ, ಇವತ್ತು ಹೇಗಿದ್ದೇವೆ, ಮುಂದೆ ಏನಾಗಬೇಕಾಗಿದೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ವಹಿಸಿದ್ದರು. ಹೆಗ್ಗುಂಜೆ ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ, ಬ್ರಹ್ಮವಾರ ಎಸ್ಸೈ ಸುಂದರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಕುಂದಾಪುರ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್, ದಸಂಸ ಹಿರಿಯ ಹೋರಾಟಗಾರ ಕುಮಾರ್ ಕೋಟ ಮಾತನಾಡಿದರು.

ವೇದಿಕೆಯಲ್ಲಿ ಮುಖಂಡರಾದ ಮಂಜುನಾಥ ಹಳಗೇರಿ, ಹರೀಶ್ ಮಲ್ಪೆ, ಹೆಗ್ಗುಂಜೆ ಗ್ರಾಪಂ ಸದಸ್ಯರಾದ ಕೃಷ್ಣ ಮರಕಾಲ, ಜ್ಯೋತಿ ಶೆಟ್ಟಿ, ಉದ್ಯಮಿ ಮಹಾಬಲ, ಲೊಕೇಶ್ ಶೆಟ್ಟಿ, ಜಯಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ನಾರಾಯಣ ಸ್ವಾಗತಿಸಿದರು. ವಿನಯ ವಂದಿಸಿದರು. ಉಪನ್ಯಾಸಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News