ಕುಚ್ಚೂರಿನಲ್ಲಿ ಸುಂಟರಗಾಳಿ : ಹಲವು ಮನೆಗಳಿಗೆ ಹಾನಿ

Update: 2019-09-08 15:13 GMT

ಹೆಬ್ರಿ, ಸೆ. 8: ಕುಚ್ಚೂರು ಗ್ರಾಪಂ ವ್ಯಾಪ್ತಿಯ ಬೇಳಂಜೆ ಪರಿಸರದಲ್ಲಿ ರವಿವಾರ ಬೀಸಿದ ಭಾರೀ ಸುಂಟರಗಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಚಿಣ್ಣರಕಟ್ಟೆ, ಬೀದಿಬೆಟ್ಟು, ಮಂಡೊಳ್ಳಿ, ಹೆರ್ಜೆಡ್ಡು ಪರಿಸರದ 19 ಮನೆಗಳಿಗೆ ಮತ್ತು 15 ಮನೆಗಳ ಅಡಿಕೆ, ತೆಂಗು ತೋಟಗಳಿಗೆ ಅಪಾರ ಹಾನಿ ಉಂಟಾಗಿದೆ. ಭಾರೀ ಗಾಳಿಯಿಂದ ಬೃಹತ್ ಮರಗಳು ರಸ್ತೆಗೆ ಉರುಳಿ ಬಿದಿದ್ದು, 30ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಸುಮಾರು 5 ಲಕ್ಷ ರೂ. ನಷ್ಟವಾಗಿದೆ. ಇದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಬೇಳಂಜೆ ಕೆರೆಮನೆಯ ತಮ್ಮು ನಾಯ್ಕ ಎಂಬವರ ಮನೆಗೆ ಭಾರೀ ಪ್ರಮಾಣ ದಲ್ಲಿ ಹಾನಿ ಉಂಟಾಗಿ 5ಲಕ್ಷ ನಷ್ಟ ಸಂಭವಿಸಿದೆ. ಬೇಳಂಜೆ ದೇವಸ್ಥಾನಬೆಟ್ಟು ಮೀನಕ್ಕ ಮರಕಾಲ್ತಿ ,ಲಲಿತಾ ಮರಕಾಲ್ತಿ, ಜಯಲಕ್ಷ್ಮೀ, ನಾಗು ನಾಯ್ಕ, ಸೀತಾ ಮರಕಾಲ್ತಿ, ಪೂರ್ಣಿಮ ಸೇರ್ವೆಗಾರ್, ವಿಮಲ, ಸುಶೀಲ, ರತ್ನ, ಪದ್ದು ಪೂಜಾರ್ತಿ, ಮೃದುಲ, ಭುಜಂಗ ಶೆಟ್ಟಿ, ಗುಲಾಬಿ ಶೆಟ್ಟಿ ಎಂಬವರ ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.

ಬೀದಿಬೆಟ್ಟು ರಾಮ ನಾಯ್ಕ, ಪುರುಷ ನಾಯ್ಕ, ಲಕ್ಷ್ಮಣ ನಾಯ್ಕ, ಸುಬ್ರಾಯ ನಾಯ್ಕ ಎಂಬವರ ಅಡಿಕೆ ತೋಟಗಳಿಗೆ ಅಪಾರ ಹಾನಿ ಉಂಟಾಗಿದೆ. ಕುಚ್ಚೂರು ಬೇಳಂಜೆ ಪರಿಸರದಲ್ಲಿ ಒಟ್ಟು 32 ಕಂಬಗಳು ಧರೆಗೆ ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ. ಇದರಿಂದ ಇಡೀ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬೇಳಂಜೆ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಆವರಣ ದಲ್ಲಿ ಹಾಕಲಾಗಿದ್ದ ಗಣೇಶೋತ್ಸವದ ಚಪ್ಪರ ಗಾಳಿಮಳೆಗೆ ಕುಸಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಸುಂಟರಗಾಳಿಗೆ ಬೇಳಂಜೆಯಲ್ಲಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ಬೇಳಂಜೆ-ಆರ್ಡಿ ರಸ್ತೆ ಸಂಚಾರದಲ್ಲಿ ಕೆಲವು ಗಂಟೆಗಳ ಕಾಲ ವ್ಯತ್ಯಯ ಉಂಟಾಯಿತು. ಇದರಿಂದ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸ ಲಾಗಿತ್ತು. ಮಧ್ಯಾಹ್ನ ವೇಳೆ ಸ್ಥಳೀಯರ ಹಾಗೂ ಅರಣ್ಯ ಇಲಾಖೆ ಶ್ರಮದಿಂದ ರಸ್ತೆಯ ಮರಗಳನ್ನು ತೆರವುಗೊಳಿಸಲಾಯಿತು.

ಹಾನಿಗೊಂಡ ಪ್ರದೇಶಗಳಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಜಿಪಂ ಸದಸ್ಯೆ ಜ್ಯೋತಿ ಹರೀಶ್, ತಾಪಂ ಸದಸ್ಯ ಅಮೃತ ಕುಮಾರ್ ಶೆಟ್ಟಿ, ಕುಚ್ಚೂರು ಗ್ರಾಪಂ ಅಧ್ಯಕ್ಷ ರಾಮಣ್ಣ ಪೂಜಾರಿ, ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಮೆಸ್ಕಾಂ ಶಾಖಾಧಿಕಾರಿ ಲಕ್ಷ್ಮೀಶ್, ಗ್ರಾಮ ಲೆಕ್ಕಿಗ ಹಿತೇಶ್, ಪಿಡಿಓ ಆನಂದಕುಮಾರ್ ಬಿ.ಕೆ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News