ಹಿರಿಯ ನ್ಯಾಯವಾದಿ ವಿಠಲ್ ಶೆಟ್ಟಿಗಾರ್ ನಿಧನ
ಉಡುಪಿ, ಸೆ.8: ಉಡುಪಿಯ ಹಿರಿಯ ನ್ಯಾಯವಾದಿ ವಿಠಲ್ ಶೆಟ್ಟಿಗಾರ್ (84) ಅಲ್ಪಕಾಲದ ಅಸೌಖ್ಯದಿಂದ ಸೆ.8ರಂದು ಕಿನ್ನಿಮುಲ್ಕಿಯಲ್ಲಿರುವ ಸ್ವಗೃಹ ದಲ್ಲಿ ನಿಧನರಾದರು.
ಪೆರ್ಡೂರು ಶಾಲೆಯ ಅಧ್ಯಾಪಕರಾಗಿ, ನಂತರ ಅಂಚೆ ಮತ್ತು ತಂತಿ ಕಚೇರಿಯ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದ ಇವರು, 1969ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ, ಉಡುಪಿ ಕಾನೂನು ಕಾಲೇಜು ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾ ಲಯದ ಅತಿಥಿ ಉಪಸ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಅವಿಭಜಿತ ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಉಡುಪಿ ನಗರಸಭೆ ಉಪಾಧ್ಯಕ್ಷರಾಗಿ, ಉಡುಪಿ ಮಲ್ಪೆ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜನಸಂಘದ ಕಾರ್ಯಕರ್ತರಾಗಿ ಇವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು.
ಮೃತರು ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.